Friday, March 25, 2011

ಕೇರಳ, ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳ ಕಷ್ಟ!

ತಮಿಳ್ನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಶಿಕ್ಷಣದಲ್ಲಿ ಕಡ್ಡಾಯವಾದದ್ದಕ್ಕೆ ಕನ್ನಡಾಭಿಮಾನಿಗಳು ಕನಲಿ ಕಳವಳಿಸುತ್ತಿದ್ದಾರೆ! ಕೇರಳದ ಮೇಲೆ ಕೆರಳೋಣವೇ; ಅಥವಾ ತಮಿಳ್ನಾಡಿನ ಕಾಲಿಗೆ ಬಿದ್ದು ’ಕನ್ನಡವನ್ನು ಕಾಪಾಡಿ’ ಎಂದು ಬೇಡಿಕೊಳ್ಳೋಣವೇ?!
ನಾವು ಸ್ವೀಕರಿಸಿರುವ ಭಾಷಾವಾರು ಪ್ರಾಂತ ರಚನೆ ಪದ್ಧತಿಯ ವಿವೇಕದಲ್ಲಿ ನಮಗೆ ನಂಬಿಕೆಯಿದೆ ತಾನೇ? ಅಂದಮೇಲೆ ಆಯಾ ಎಲ್ಲೆಕಟ್ಟಿನ ಪ್ರಾಂತದಲ್ಲಿ ಆ ಪ್ರದೇಶ ಭಾಷೆಯ ಪಾರಮ್ಯವನ್ನು ಗೌರವಿಸಬೇಕಾದ್ದೂ ಅನಿವಾರ‍್ಯವಾಗುವುದಿಲ್ಲವೇ?
ಶಿಕ್ಷಣ ಭಾಷೆ ವಿಚಾರದಲ್ಲಿ ನಾವು “ಪ್ರಾದೇಶಿಕ ಭಾಷೆ”ಯನ್ನು “ಮಾತೃ ಭಾಷೆ”ಯೊಂದಿಗೆ ತಳುಕು ಹಾಕುವ ತಪ್ಪು ಮಾಡುತ್ತಬಂದಿರುವುದೂ ಗೊಂದಲಕ್ಕೆ ಒಂದಷ್ಟು ಕಾರಣ. ಭಾಷಾವಾರು ಪ್ರಾಂತವೊಂದರ ಸರಕಾರದ ಆದ್ಯತೆ, ತನಗೆ ಅಸ್ತಿತ್ವವನ್ನು ಕೊಡಮಾಡುವ ಪ್ರದೇಶಿಕ ಭಾಷೆಗಿರಬೇಕೆನ್ನುವುದು ವಸ್ತುನಿಷ್ಠ ನಿರೀಕ್ಷೆ ತಾನೇ? ಆ ಭಾಷೆ, ಆ ರಾಜ್ಯದ, ಹೆಚ್ಚು ಕಮ್ಮಿ, ಎಲ್ಲರ ಮಾತೃ ಭಾಷೆಯೂ ಆಗಿರುತ್ತದೆನ್ನುವುದು ಸಹಜ. ’ನಮ್ಮ ಮಕ್ಕಳಿಗೆ ರಾಜ್ಯ ಭಾಷೆಯ ಮೂಲಕ ಶಿಕ್ಷಣ ನೀಡುತ್ತೇವೆ’ ಎಂಬ ಸಂಕಲ್ಪದ ಅರ್ಥ, “ಮಕ್ಕಳ ಮಾತೃ ಭಾಷೆ”ಯಲ್ಲಿ ಶಿಕ್ಷಣ ನೀಡುವುದು ಎಂದಾಗಬಾರದು! ಆದರೆ ಮೂರ್ಖತನದ ಅಂಥಾ ಘೋಷಣೆ, ಹೇಗೊ, ತಿಳಿದೋ, ತಿಳಿಯದೆಯೋ ಚಾಲ್ತಿಗೆ ಬಂದುಬಿಟ್ಟಿದೆ! ಈ ನೆಪ, ಒಡಕು ಹಾಲಿನ ಕೊಳಕು ರಾಜಕೀಯ ಮಾಡುವ ಫುಡಾರಿಗಳ ಕೈ ಕೈದುವಾಗಿ, ಮರಾಠಿ, ಮಲೆಯಾಳಿ, ತೆಮಿಳು, ತೆಲುಗುಗಳನ್ನು ನಾವೇ ಅನಗತ್ಯವಾಗಿ ಮೈಮೇಲೆಳೆದುಕೊಳ್ಳಬೆಕಾದ ಪ್ರಸಂಗಕ್ಕೆ ಕಾರಣವಾಗಿದೆ!
ಒಂದು ಮಣ್ಣಿನಲ್ಲಿ ಕಾಲೂರಿನಿಂತು, ಅದರ ನೀರನ್ನು ಕುಡಿದು ಬದುಕುವ ಪ್ರತಿಯೊಬ್ಬರೂ ಆ ನೆಲದ ಭಾಷೆಯನ್ನೂ ಮೈತುಂಬಿಕೊಳ್ಳಬೇಕಾದ್ದು ಅತ್ಯಗತ್ಯ. ತಮಿಳ್ನಾಡು ಮತ್ತು ಕೇರಳಗಳು ಆ ಕಡ್ಡಾಯವನ್ನು ಜಾರಿ ಮಾಡಿವೆ. ಅವುಗಳ ವಿರುದ್ಧ ಉಗ್ರ ಘೋಷಣೆ ಕೂಗುವ ಕಾಗದದ ಹಿರೋತನಕ್ಕಿಂತಾ ನಮ್ಮ ನಾಡಿನಲ್ಲಿ ಇಡೀ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿ, ಕನ್ನಡ ಮಾತ್ರದಲ್ಲಿ ವ್ಯವಸ್ಥೆಗೊಳಿಸುವ ಪಟ್ಟು ಹೆಚ್ಚು ವೀರ‍್ಯವತ್ತಾದೀತಲ್ಲವೇ?

Tuesday, March 22, 2011

ಮಠಗಳು; ಪ್ರಯೋಜನ ಮತ್ತು ಅನುದಾನ

ಮಠಗಳು; ಪ್ರಯೋಜನ ಮತ್ತು ಅನುದಾನ
ಮಠಗಳಿಗೆ ಸರಕಾರೀ ಅನುದಾನ ಅವಶ್ಯವಾಗಿ ಬೇಕು; ಇದರಲ್ಲಿ ರಾಜಕೀಯ ಸುತರಾಂ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸಲು ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ಲೇಖನ ಬರೆದಿದ್ದಾರೆ.
ಅವರೆಂದಿರುವಂತೆ, ದೊಡ್ಡ ಮಠಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೈದ್ಯಕೀಯ ತಾಂತ್ರಿಕ Course ಗಳಲ್ಲೂ Demandful ಶಿಕ್ಷಣ ನೀಡುತ್ತಿದ್ದು, ಆ ದಕ್ಷತೆಯಿಂದ ವಿಶ್ವವಿದ್ಯಾಲಯ ಎಂಬ ಔನ್ನತ್ಯವನ್ನೂ ಪಡೆದಿರುವುದಿದೆ. ಆದರೆ ಮಠಗಳೆಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಈ ಮೂಲಭೂತ ಉದ್ದೇಶಕ್ಕಾಗಿಯೇ? ಅಲ್ಲವೇ ಅಲ್ಲ!
ವಿರಕ್ತ-ವೈರಾಗಿಗಳ ಸಾಧನೆ, ತಪಶ್ಚರ‍್ಯೆ, ಲೋಕಾನುಕಂಪ ಮುಂತಾದ ಪ್ರಾಂಜಲ ಗುಣಗಳಿಗೆ ಮನಸೋತು ಅವರ ಸುತ್ತ ಘೇರಾಯಿಸಿದ ಜನಮಾನಸ ಅವರುಗಳನ್ನು ಎಷ್ಟು ಹಚ್ಚಿಕೊಂಡಿರುತ್ತಿತ್ತೆಂದರೆ, ಅವರ ದೇಹವಸಾನದ ನಂತರ ಆ ಅಗಲಿಕೆಯನ್ನು ಸಹಿಸಲಾರದೆ ಅವರ ನೆನಪನ್ನೇ ಮಠವಾಗಿ ಬೆಳೆಸಿಕೊಂಡು ಬಂದಿರುವ ವಾಸ್ತವವಿದೆ. ಇನ್ನೊಂದೆಡೆ ಆಚಾರ‍್ಯ ಪರಂಪರೆ, ಜ್ಞಾನದ ಆಳಕ್ಕಿಳಿದಿಳಿದು, ಒಂದೇ ಶಾಸ್ತ್ರದಲ್ಲಿ ತಮ್ಮ ತಮ್ಮ ಸೂಕ್ಷ್ಮ ವಿಶಿಷ್ಟತೆಯ ಸಿದ್ಧಾಂತಗಳನ್ನು ಸ್ಥಾಪಿಸಿ ಪ್ರತ್ಯೇಕ ಮಠಗಳಾಗಿ ಕವಲೊಡೆದು ಬಂದಿದೆ.
ಹೀಗಾಗಿ ಸಮಾಜ ಸೇವೆಯ ವಿಶಿಷ್ಟತೆ ಒಂದೆಡೆ, ಸೈದ್ಧಾಂತಿಕ ವಿಭಿನ್ನತೆ ಇನ್ನೊಂದೆಡೆ. ಇವು ಮಠಗಳ ಅಸ್ತಿತ್ವದ ಜೀವಾಳ. ಆದ್ದರಿಂದ ಮಠಗಳಿಗೆ ಅನುದಾನ ಕೊಡುವುದೇ ಆದರೆ, ಅದು ಅವುಗಳ ಸುಸೂಕ್ಷ್ಮ ಪರಿಣಿತಿ - Specialization - ಮತ್ತು ಪುರಾತತ್ವ ಮೌಲ್ಯ - Archival Value -ಕಾಪಾಡಿಕೊಳ್ಳುವಷ್ಟಿದ್ದರೆ ಬೇಕಾದಷ್ಟಾಗುತ್ತದೆ; ಇದಕ್ಕೆ ಶತಕೋಟಿ, ಸಹಸ್ರ ಕೋಟಿಗಟ್ಟಲೆಗಳ ಅಗತ್ಯ ಖಂಡಿತಾ ಇರುವುದಿಲ್ಲ!
ಈ ಕೋಟಿಗಟ್ಟಲೆಯೇನಿದ್ದರೂ, ಜಾತಿಯನ್ನು ವೋಟಿನ ಸಂಖ್ಯಾ ಶಕ್ತಿಯನ್ನಾಗಿಸುವ ಉದ್ಯಮದ ಮೇಲೆ ಹೂಡುವ ಬಂಡವಾಳವಾಗುವುದು! ಇದನ್ನು ಕೈಗೊಂಡ ಆಧ್ಯಾತ್ಮ ಪುರುಷ ವೇಷಧಾರಿಗಳು, ಪರಿಣಿತ ಸೈದ್ಧಾಂತಿಕ ಭಿನ್ನತೆಯ Academics ಅನ್ನು ವೋಟಿನ Margin ಆಗಿ ಪರಿವರ್ತಿಸುವ ಪವಾಡ ಪುರುಷರಾಗಿ ಮೆರೆದುಬಿಡುತ್ತಾರೆ!
ಅತ್ಯಲ್ಪ ಸಂಖ್ಯಾತರಾದ ಸಭ್ಯ, ಸಾತ್ವಿಕ, ಸತ್ಪುರುಷರ ಅಳಲೇನೆಂದರೆ, ಈ ಮೆಲಾಟದಲ್ಲಿ ಅನೂಚಾನ ಪರಂಪರೆ, ಸಮಪ್ರದಾಯ, ಆಚಾರ, ಸುಸೂಕ್ಷ್ಮ ಚಿಂತನಶೀಲತೆಯ ಪರಿಣಿತಿಗಲೆಲ್ಲಾ ಏಕಾಏಕೀ ಭ್ರಷ್ಟ - Corrupt - ಅಗಿ ಜೀವನ ಸ್ವಾರಸ್ಯವೇ ನಷ್ಟವಾಗಿ ಹೋಗುತ್ತಿದೆಯಲ್ಲಾ ಎನ್ನುವುದು!

Friday, March 18, 2011

ವ್ಯಾಸರಾಜ ಮಠ - ಆಗಬೇಕಾದ್ದೇನು?....

.
                ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1, ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯವೂ ಅಲ್ಲುಂಟು. ಆದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೂಚು-ಕೂಚಾದ ಕಟ್ಟಡಕ್ಕೆ ಇದ್ದಿದ್ದರಲ್ಲೊಂದು ‘ಷೇಪು’ ನೀಡಿದ ಪುಣ್ಯ ಶ್ರೀವಿದ್ಯಾಪಯೋನಿಧಿತೀರ್ಥ ಸ್ವಾಮಿಗಳದ್ದು. ಶ್ರೀಮಠದ ಇಂತಹ ಹತ್ತು-ಹಲವು ಕಟ್ಟಡಗಳಿಗೆ ಸಹ ಹೀಗೆ ಲಾಭದಾಯಕವಾಗಿ ಆಕೃತಿ-ಆಯಾಮಗಳನ್ನು ನೀಡಿದ ಕೀರ್ತಿಯೂ ಅವರದೇ. ಆದರೆ ಮುಂದೆ ಮಠವೇ ‘ಷೇಪೆದ್ದುಹೋಗುವ’ ಮುಂಗಾಣ್ಕೆ ಸ್ವಾಮಿಗಳಿಗಿರದೇ ಹೋದದ್ದು ಶಿಷ್ಯರ ದುರ‍್ದೈವವೆಂದಕೊಳ್ಳೋಣವೇ?!
                ಶ್ರೀ ವ್ಯಾಸರಾಯರ ವಿದ್ಯಾ ಕರ್ನಾಟಕ ಸಿಂಹಾಸನದ ಅಧುನಾ ತರುಣ ಸ್ವಾಮೀಜಿಯ ದುಸ್ಸಾಹಸಗಳು ಈಗ ಪದರ ಬಿಚ್ಚಿಕೊಳುತ್ತಿವೆ. (ಅಥವಾ ಪ್ರಯತ್ನಪೂರ್ವ ಬಿಚ್ಚಲಾಗುತ್ತಿದೆ?!) ಚಾತಕಪಕ್ಷಿಗಳಂತೆ ಕಾದಿರುವ ಮಾಧ್ಯಮಗಳು ತಮ್ಮ ‘ಕಾಯಕಧರ‍್ಮ’ಕ್ಕನುಗುಣವಾಗಿ ಮೈಕೂ-ಮಸೂರ ಹಿಡಿಯುತ್ತಿವೆ! ತಿರುಮಲ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೊನ್ನೆ ಮೊನ್ನೆ ಆಂಧ್ರದ ಪೋಲಿಸರು, ನಂ.1 ಗೊವಿಂದಪ್ಪ ರಸ್ತೆ ಅವರಣದಿಂದಲೇ ಸ್ವಾಮೀಜಿಯನ್ನು ಕರೆದೊಯ್ದಿದ್ದು. ಶಿಷ್ಯರಲ್ಲಿ, ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿದ ಘಟನೆಯಿದು. “ಹಿತೈಷಿಗಳ” ನೆರವಿನಿಂದ ಸ್ವಾಮಿಗಳೇನೋ ಮಾರನೆ ಬೆಳಿಗ್ಗೆಯೇ ಹಿಂದಿರುಗಿದರು. ಅದಾದ್ದು ಫಾಲ್ಗುಣ ಶುದ್ಧ ಏಕಾದಶಿಗೆ ಎರಡು ದಿನ ಮುಂಚೆ. ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನು ಪೂರ್ವಾನುಮಾನದಿಂದ ಕಾದಿದ್ದರೋ ಎಂಬಂತೆ, ಶ್ರೀಮಠದ ಶಿಷ್ಯರೆಂಬ ಹಲಕೆಲವರು, ಸ್ವಾಮಿ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಪಟ್ಟುಹಿಡಿದು, ‘ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು, ಜೋಕೆ’ ಎಂದು ಎಚ್ಚರಿಕೆಯನ್ನೂ ಇಟ್ಟರು! ಮನೋಹರತೀರ್ಥರು ಪೀಠ ಬಿಡಲಿಲ್ಲವಾಗಿ ಪಂಡಿತೊತ್ತಮರ ಏಕಾದಶೀ ಉಪವಾಸ ಸಾಂಗವಾಯಿತು ಎನ್ನೋಣವೇ?!
ಈ ಭಂಡಾಟ-ಮೊಂಡಾಟದಲ್ಲೂ, ವಿದ್ಯಾಮನೋಹರತೀರ್ಥರೆಂಬ ತರುಣ ಸ್ವಾಮೀಜಿಯನ್ನು ಪೀಠದಿಂದಿಳಿಸುವುದು ಖಚಿತ ಎಂಬ ಅಭಿಮತ ಕೆಲ ವಿಚಾರಶೀಲರಲ್ಲಿದ್ದಂತಿದೆ! ನೈತಿಕ ಹೊಣೆ ಹೊತ್ತು ಆ ಕೆಲಸ ಮಾಡಿ ಎಂದವರ ಅಬ್ಬರದ ಕೂಗು! ಅಂತಹ ನೈತಿಕ ಹೊಣೆ ಎನ್ನುವುದು ಅವರಿಗಿದ್ದಿದ್ದರೆ ಪೀಠ ಹತ್ತುತ್ತಿದ್ದರೆ; ಇವರಿಗಿದ್ದಿದ್ದರೆ ಅಂಥಾ ಕೂಗು ಹಾಕುತ್ತಿದ್ದರೇ?!
420ರ ಪರಿಚ್ಛೇದದ ಕಾರ‍್ಯಚಟುವಟಿಕೆಗಳಿಗಾಗಿ ವ್ಯಕ್ತಿಯ ಮೇಲೆ ಕಾನೂನು ಕ್ರಮವನ್ನೇನೋ ಜರುಗಿಸಬಹುದು; ಅದು ಸಾಬೀತಾದರೆ ಸರಕಾರ ಮಠವನ್ನು ತಾತ್ಕಾಲಿಕವಾಗಿ Supersede ಮಾಡುವುದಕ್ಕೂ ಮುಂದಾಗಬಹುದು. ಆದರೆ ನಂತರದಲ್ಲಾದರೂ ಮುಖ್ಯಮಂತ್ರಿ ಅಥವಾ ಮುಜರಾಯಿ ಮಂತ್ರಿ, ಹೊಸ ಸ್ವಾಮೀಜಿಯೊಬ್ಬರಿಗೆ ಆಶ್ರಮ ಕೊಟ್ಟು ನೇಮಿಸಲು ಬರುತ್ತದೆಯೇ; ಅದಕ್ಕೆ “ಕರಕಮಲ ಸಂಜಾತತ್ವ”ದ ಪಾವಿತ್ರ್ಯವಾದರೂ ಪ್ರಾಪ್ತವಾಗುತ್ತದೆಯೇ?!
                ವ್ಯಾಸರಾಯ ಮಠಕ್ಕಾಗಲೀ, ಇಂತಹ ಇನ್ನುಳಿದ ಪ್ರಾಚೀನ ಪೀಠಪರಂಪರೆಗಾಗಲೀ ಲಾಗಾಯ್ತಿನಿಂದ ಬಂದ ಸ್ವತ್ತು-ಸಂಪತ್ತುಗಳಿರುವುದು ಸಹಜ. ಇತಿಹಾಸ ಕಾಲದ ಆಳರಸರು, ಸಾಮಂತರು, ಪಾಳೇಗಾರರು ಅಪಾರ ಪ್ರಮಾಣದ ಸ್ಥಿರಾಸ್ತಿಗಳನ್ನು ಮಠ-ಮಾನ್ಯಗಳಿಗೆ ಶಾಸನಬದ್ಧವಾಗಿ ದಾನ ಮಾಡಿರುತ್ತಾರೆ. ಸಾಹುಕಾರರೂ, ಶ್ರೀಮಂತರೂ, ಸಾಮಾನ್ಯರೂ ಅಂದಂದಿನ ಪೀಠಾಧಿಪತಿಗಳ ತಪಃಪ್ರಭಾವದಿಂದ ಉಪಕೃತರಾಗಿ ವಡವೆ-ವಸ್ತ್ರ, ಧನ-ಕನಕಗಳ ದೇಣಿಗೆ ನೀಡಿರುವುದೂ ಇರುತ್ತದೆ. ಅದು ಇಂದಿನ ಯುಗದಲ್ಲಿ ಸಹ ಮುಂದುವರೆದುಕೊಂಡ ಬಂದಿರುವ ವಿದ್ಯಮಾನವೇ. ಆದರೆ ಮಠ-ಸಂಸ್ಥಾನಗಳಿರುವುದು ಬರೀ ದುಡ್ಡು ಮಾಡುವುದಕ್ಕೇ ಅಲ್ಲ; ಅವುಗಳ ಮಹತಿ ದುಡ್ಡಿನಿಂದ ಅಳೆಯುವಂಥದೂ ಅಲ್ಲ. ಅನೂಚಾನ ಮಠಗಳು, ವೈಷ್ಣವವಾಗಲೀ, ಶೈವ-ವೀರಶೈವವೇ ಆಗಲಿ, ಅವುಗಳ ಅಸ್ತಿತ್ವ, ವಿಶಿಷ್ಟ ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಪರಿವ್ರಾಜಕ ಪೀಠಪತಿಗಳು Authority ಮತ್ತು ಮೇಲ್ಪಂಕ್ತಿ ಎನ್ನುವ ಮೂಲಭೂತ ನೆಲೆಯನ್ನು ಹೊಂದಿಕೊಂಡಿರುತ್ತದೆ; ಅಸ್ತಿ-ಪಾಸ್ತಿಯೇನಿದ್ದರೂ ಅದಕ್ಕೆ ಪೂರಕವಾಗಬೇಕಾದ್ದು, ಅಷ್ಟೆ.
                ಈಗಿರುವ ಸವಾಲು, ವ್ಯಾಸರಾಜಮಠಕ್ಕಾಗಲೀ, ಅದರ ವಿದ್ಯಾಮನೋಹರತೀರ್ಥರೆಂಬ ಒಬ್ಬ ಸ್ವಾಮೀಜಿಗಾಗಲೀ ಸೀಮಿತವೆಂದು ಭಾವಿಸಬಾರದು. ಇದನ್ನು ಘಟ್ಟದ ಮೇಲಿನ ಎಲ್ಲಾ ಮಾಧ್ವ ಮಠಗಳೂ, ಯತಿಗಳೂ ಗಂಭೀರವಾಗಿ ಸ್ವೀಕರಿಸಬೇಕು. ಹಿರಿಯ ಅನುಭವೀ, ಅನುಭಾವೀ ಯತಿಗಳಾದ ಶ್ರೀವಿದ್ಯಾಸಾಗರತೀರ್ಥರು, ಶ್ರೀಲಕ್ಷ್ಮೀಂದ್ರತೀರ್ಥರಾದಿಯಾಗಿ ಇನ್ನೂ ಹಲವರು, ಲಾಗಾಯ್ತಿನಿಂದ ವ್ಯಾಸರಾಜ ಮಠದೊಂದಿಗೆ ಸಾಥ್ ಮತ್ತು ಸಲ್ಲಾಪಗಳನ್ನು ಹೊಂದಿರುವ ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ತೀರ್ಥರೂ, ಅಲ್ಲದೆ ವ್ಯಾಸರಾಯ ಮಠಕ್ಕೆ ಸರಿ-ಸಾಟಿಯಾದ ಮಹತ್ವ ಹೊಂದಿರುವ ಉತ್ತರಾದೀಮಠ, ರಾಯರಮಠಗಳ ಶ್ರೀ ಸತ್ಯಾತ್ಮ ತೀರ್ಥರು ಮತ್ತು ಶ್ರೀ ಸುಯತಿಂದ್ರ ತೀರ್ಥರು ನಮ್ಮ ನಡುವೆ ಇದ್ದಾರೆ. ಅವರೆಲ್ಲಾ ಒಗ್ಗೂಡಿ “ಯತಿ ಸಂಹಿತೆ”ಯನ್ನು ಪುನಾರಚಿಸಿಕೊಳ್ಳುವುದು ನಿರೀಕ್ಷಣೀಯ; ಈಗಾಗುತ್ತಿರುವ ಉಲ್ಲಂಘನೆ-ಅನಾಚಾರಗಳು ಇಡೀ ಮಾಧ್ವ ಸಮುದಾಯಕ್ಕೆ ಹೇಗೆ ಮಾರಕ ಎಂಬುದನ್ನು ಯತಿಸಮುದಾಯ ಆಲೋಡನೆ ಮಾಡಬೇಕು; ಹಾದಿ ತಪ್ಪುತ್ತಿರುವ ಯುವ ಯತಿಗೆ ಮೂಗುದಾರ ಹಾಕಿ ಪಳಗಿಸಿ ತಮ್ಮೊಂದಿಗೆ ಒಯ್ಯುವುದು ಸಾಧ್ಯವೇ ಎಂಬುದನ್ನು ಆ ಬೆಳಕಿನಲ್ಲಿ ಅವಲೋಕಿಸಬೇಕು; ಇಲ್ಲಾ ಅವರಿಗೆ ಮುಕ್ತಿ ಕೊಟ್ಟು ಇನ್ನೇನಾದರೂ ಪರ‍್ಯಾಯ ವ್ಯವಸ್ಥೆ ಮಾಡಬೇಕೇ ಎನ್ನವುದನ್ನೂ ಆ ಮಠಾಧಿಪತಿ ಸಮೂಹವೇ ನಿರ್ಧರಿಸುವುದು ಸಾಧುವಾಗುತ್ತದೆಯೇ ಹೊರತು ಶಿಷ್ಯವೃಂದವೆಂದುಕೊಂಡ ಅಮೂರ್ತ ಸಂಘಟನೆಯಲ್ಲ! 

Sunday, March 13, 2011

ಚೆಕ್ ಹಾರಿದ್ದಕ್ಕೆ ಪೀಠ ಬಿಡಬೇಕೇ?

                ಎಪ್ಪತ್ತು ಲಕ್ಷ ರೂಪಾಯಿ ವ್ಯವಹಾರ. ಒಬ್ಬ ವ್ಯವಹಾರಸ್ಥ ಇನ್ನೊಬ್ಬರಿಗೆ ಚೆಕ್ ಕೊಡುತ್ತಾರೆ; ಖಾತೆಯಲ್ಲಿ ಹಣವಿಲ್ಲವೆಂದು ಬ್ಯಾಂಕ್ ತಿರಸ್ಕರಿಸುತ್ತದೆ. ವಿವಂಚಿತರ ಫಿರ‍್ಯಾದು; ಪೊಲೀಸರು ಉತ್ತರದಾಯಿಯನ್ನು ಬಂಧಿಸುತ್ತಾರೆ... ಇತ್ಯಾದಿ      ದಿನನಿತ್ಯದ ಕ್ರೈಮ್ ರೌಂಡ್‌ನಲ್ಲಿ ಇಂಥಾ ಎಷ್ಟು ಮಾಹಿತಿಗಳೋ... ಚೆಕ್ ಕೊಟ್ಟವರು ಒಬ್ಬ ಪೀಠಾಧಿಪತಿಯಾಗಿದ್ದರು ಎನ್ನುವುದು ಈಗಿನ ಹೆಚ್ಚುಗಟ್ಟಲೆ. ಸ್ವಾಮಿ ಪೀಠತ್ಯಾಗ ಮಾಡಬೇಕೆಂದು ಶ್ರೀಮಠದ ಶಿಷ್ಯರೆಂಬ ಹಲಕೆಲವರ ಪಟ್ಟು. ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು ಜೋಕೆ ಎಂದು ಈ ಮಾಧ್ವರು ಎಚ್ಚರಿಕೆ ನೀಡಿದ್ದು ಸ್ವಾರಸ್ಯ!
                ಹಲವು ಮಾಧ್ವರ ಒಂದು ದಿನದ ಹರಿದಿನ ಆಚರಣೆಗಾದರೂ ಈ ಮೂಲಕ ಅವಕಾಶ ಮಾಡಿಕೊಟ್ಟ ಸ್ವಾಮಿಗಳು ಪರೊಕ್ಷವಾಗಿ ಧನ್ಯರೇ ಆಗಿಬಿಡುತ್ತಾರೆ!
                ಅನೂಚಾನ ಮಠಗಳ ಸ್ವಾಮಿಗಳಾದವರು ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಅಥಾರಿಟಿಯೂ, ಮೇಲ್ಪಂಕ್ತಿಯೂ ಆಗಬೇಕಾದವರು. ಅಂಥವರು ಲಕ್ಷ-ಕೋಟಿಗಳ ಲೌಕಿಕ ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಂಡಾಗಲೇ ಅವರ ನೈತಿಕ ಹೊಣೆಗೇಡಿತನ ರಾಜಾರೊಷವಾಗಿಬಿಡುತ್ತದೆ! ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನೇ ಕಾದಿದ್ದು, ಅವರು ಪೀಠವನ್ನೇ ಬಿಟ್ಟುಬಿಡಬೇಕೆಂದು ಪಟ್ಟು ಹಿಡಿಯುವುದು, ಸಾತ್ವಿಕತೆಯನ್ನಲ್ಲ, ಪಟ್ಟಭದ್ರತೆಯನ್ನು ಮಾತ್ರಾ ಪ್ರದರ್ಶಿಸೀತು!