Sunday, March 13, 2011

ಚೆಕ್ ಹಾರಿದ್ದಕ್ಕೆ ಪೀಠ ಬಿಡಬೇಕೇ?

                ಎಪ್ಪತ್ತು ಲಕ್ಷ ರೂಪಾಯಿ ವ್ಯವಹಾರ. ಒಬ್ಬ ವ್ಯವಹಾರಸ್ಥ ಇನ್ನೊಬ್ಬರಿಗೆ ಚೆಕ್ ಕೊಡುತ್ತಾರೆ; ಖಾತೆಯಲ್ಲಿ ಹಣವಿಲ್ಲವೆಂದು ಬ್ಯಾಂಕ್ ತಿರಸ್ಕರಿಸುತ್ತದೆ. ವಿವಂಚಿತರ ಫಿರ‍್ಯಾದು; ಪೊಲೀಸರು ಉತ್ತರದಾಯಿಯನ್ನು ಬಂಧಿಸುತ್ತಾರೆ... ಇತ್ಯಾದಿ      ದಿನನಿತ್ಯದ ಕ್ರೈಮ್ ರೌಂಡ್‌ನಲ್ಲಿ ಇಂಥಾ ಎಷ್ಟು ಮಾಹಿತಿಗಳೋ... ಚೆಕ್ ಕೊಟ್ಟವರು ಒಬ್ಬ ಪೀಠಾಧಿಪತಿಯಾಗಿದ್ದರು ಎನ್ನುವುದು ಈಗಿನ ಹೆಚ್ಚುಗಟ್ಟಲೆ. ಸ್ವಾಮಿ ಪೀಠತ್ಯಾಗ ಮಾಡಬೇಕೆಂದು ಶ್ರೀಮಠದ ಶಿಷ್ಯರೆಂಬ ಹಲಕೆಲವರ ಪಟ್ಟು. ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು ಜೋಕೆ ಎಂದು ಈ ಮಾಧ್ವರು ಎಚ್ಚರಿಕೆ ನೀಡಿದ್ದು ಸ್ವಾರಸ್ಯ!
                ಹಲವು ಮಾಧ್ವರ ಒಂದು ದಿನದ ಹರಿದಿನ ಆಚರಣೆಗಾದರೂ ಈ ಮೂಲಕ ಅವಕಾಶ ಮಾಡಿಕೊಟ್ಟ ಸ್ವಾಮಿಗಳು ಪರೊಕ್ಷವಾಗಿ ಧನ್ಯರೇ ಆಗಿಬಿಡುತ್ತಾರೆ!
                ಅನೂಚಾನ ಮಠಗಳ ಸ್ವಾಮಿಗಳಾದವರು ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಅಥಾರಿಟಿಯೂ, ಮೇಲ್ಪಂಕ್ತಿಯೂ ಆಗಬೇಕಾದವರು. ಅಂಥವರು ಲಕ್ಷ-ಕೋಟಿಗಳ ಲೌಕಿಕ ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಂಡಾಗಲೇ ಅವರ ನೈತಿಕ ಹೊಣೆಗೇಡಿತನ ರಾಜಾರೊಷವಾಗಿಬಿಡುತ್ತದೆ! ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನೇ ಕಾದಿದ್ದು, ಅವರು ಪೀಠವನ್ನೇ ಬಿಟ್ಟುಬಿಡಬೇಕೆಂದು ಪಟ್ಟು ಹಿಡಿಯುವುದು, ಸಾತ್ವಿಕತೆಯನ್ನಲ್ಲ, ಪಟ್ಟಭದ್ರತೆಯನ್ನು ಮಾತ್ರಾ ಪ್ರದರ್ಶಿಸೀತು!

No comments:

Post a Comment