Wednesday, February 9, 2011

ಶಾಸಕರ ಜೀವಭಯ!

ಕರ್ನಾಟಕದ ಶಾಸಕರು ವ್ಯಾಪಕವಾಗಿ ಪೊಲೀಸ್ ರಕ್ಷಣೆಗಾಗಿ ಕೋರುತ್ತಿದ್ದಾರೆ. ಅದನ್ನು ಪೂರೈಸಲಾಗುತ್ತಿದೆ ಕೂಡ. ಅಂದಾಜಿನಂತೆ ಶೇ. 90ರಷ್ಟು ಶಾಸಕರು ಈಗ ಪೊಲೀಸ್ ಸಂರಕ್ಷಣೆಯಲ್ಲಿದ್ದಾರಂತೆ. ಜನಪ್ರತಿನಿಧಿಗಳು ಭೀತಿಯಿಂದ ಪೊಲೀಸ್ ರಕ್ಷಣೆಯಲ್ಲಿರುವುದು ಪ್ರತಿಷ್ಠೆಯ ಸಂಗತಿಯೋ? ಅವಮಾನದ ಸಂಗತಿಯೋ? ಶುದ್ಧ, ಚಾರಿತ್ರ್ಯ, ಶುದ್ಧ ಹಸ್ತ, ’ಶ್ರದ್ಧೆ-ಶುದ್ಧಾಂತಃಕರಣಗಳ ಅತ್ಮಸಕ್ಷಿಯುಳ್ಳವರು ಯಾವುದೇ ಹೊರಗಣ ಶಕ್ತಿಗೆ ಅಷ್ಟಾಗಿ ಅಂಜುವುದಿಲ್ಲ. ಪಕ್ಕದ ಮನೆ ಕಿಟಕಿ ಗಾಜಿಗೆ ಕಲ್ಲೆಸೆದು ಗಾಬರಿಗೊಂಡ ಮಗು ಓಡಿಬಂದು ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವುದು ಸಾಮಾನ್ಯ. ಏಟಿನ ಭಯವಷ್ಟೇ ಅಲ್ಲ, Sense of shame ಸಹ ಆ ಸುಸಂಸ್ಕೃತ ಮಗುವನ್ನು  ಕಾಡಿತು! ಈಗ ಈ ಜನಪ್ರತಿನಿಧಿಗಳನ್ನು ಕಾಡುತ್ತಿರುವುದೇನು? ಇದನ್ನು ಪೊಲೀಸ್ ರಕ್ಷಣೆ ಎನ್ನಬೇಕೋ, ಪೊಲೀಸ್ ಪಹರೆ ಎನ್ನಬೇಕೋ?
ಈ ಪಹರೆಯೂ ಅವರ ಸಾಮಾಜಿಕಾರ್ಥಿಕ ಅಪರಾಧದ ಮೇಲೆ ಕಣ್ಣಿರಿಸುವುದಕ್ಕಿಂತಾ ರಾಜಕೀಯ ಬೇಹುಗಾರಿಕೆ ಉದ್ದೇಶ ಹೊಂದಿದ್ದರೂ ಆಶ್ಚರ‍್ಯವಿಲ್ಲ! ಬಾಹುಬಲ, ಮದ್ಯಬಲ, ಹಣಬಲಗಳಿಂದಲೇ ಮಾರ್ಜಿನಲ್ ವೋಟಿನಿಂದ ಗೆದ್ದು ಬಂದವರಿಗೆ, ಅದೇ ತಂತ್ರದ ಎದುರಾಳಿಯಿಂದ ನಿರಂತರ ಪುಕ-ಪುಕವಿರುವುದು ಸಹಜವೆ. ಅದು ಜೀವ ಹೋಗುವ ಭಯಕ್ಕಿಂತಾ ಹೆಚ್ಚಾಗಿ, ಕುರ್ಚಿ ಕಳುವಾಗಿ ಹೋಗುವ ಭಯ! ಮುತ್ಸದ್ದಿತನದ ತಂತ್ರಗಾರಿಕೆಯಲ್ಲಿ ಈಗ Hidden ಭಯೋತ್ಪಾದಕತೆಯಾದ ಮಾಟ-ಮಂತ್ರವೂ ಪ್ರವೇಶಿಸಿಬಿಟ್ಟಿರುವುದರಿಂದ, ಆಳುವ ಮತ್ತು ವಿರೋಧಿಸುವ ಸೌದಾಗಾರರ ವೈಯಕ್ತಿಕ ಗನ್‌ಮ್ಯಾನ್‌ಗಳಷ್ಟೇ ಸಾಕಾಗಾವುದಿಲ್ಲ; ಜತೆಗೆ ಭೂತೋಚ್ಛಾಟಕ, ಭೂತೋತ್ಪಾದಕ ಆಚಾರು, ವಾಮಾಚಾರುಗಳನ್ನೂ ನೇಮಿಸಬೇಕಾಗಬಹುದದೇನೋ?!  

Sunday, February 6, 2011

ಪ್ರಶಸ್ತಿ ರಾಜಕೀಯ?

ಡಾ. ಚಿಮೂ - ಅಧ್ಯಯನ, ಅಧ್ಯಾಪನ ಮತ್ತು ವಿದ್ವದ್ವಲಯದಲ್ಲಿನ ಸ್ಥಾನ-ಮಾನದಲ್ಲಿ, ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟೊರೇಟ್ ಪ್ರಶಸ್ತಿಯನ್ನು ಎಷ್ಟೋ ಮೀರಿದವರು. ಎಷ್ಟೆಷ್ಟೋ ವಿದ್ಯಾರ್ಥಿಗಳಿಗೆ ಗೈಡಾಗಿ Real value ಡಾಕ್ಟೊರೇಟ್ ಪದವಿಗಳನ್ನೇ ಕೊಡಮಾಡಿಸಿರುವವರು. ಬೆಂಗಳೂರು ವಿಶ್ವವಿದ್ಯಾಲಯದ ಒಂದು ಗೌರವ ಡಾಕ್ಟೊರೇಟ್ ತಪ್ಪಿದ್ದರಿಂದ ಅವರ ತೂಕವೇನೂ ಇಳಿಯುವುದಿಲ್ಲ; ಸಿಕ್ಕಬೇಕಾದ ಬಡ್ತಿಯೊಂದು ತಪ್ಪಿಹೋಗುವುದಿಲ್ಲ!
ಮತ್ತೂ ಅಂತಹ ಸಾಧ್ಯತೆಯಿರುವುದು, ಪ್ರಶಸ್ತಿ ನಿರಾಕರಿಸಿದರೆನ್ನಲಾದ “ರಾಜಕೀಯ ಪ್ರಾಧಿಕಾರ”ಕ್ಕೇ! ತಮ್ಮದೇ ಕೈಕೆಳಗಿನ ಪರಪಕ್ಷದ ಸರಕಾರವೊಂದನ್ನು ಉರುಳಿಸುವ, ಉಳಿಸುವ ಆ “ಮರ್ಜಿ ಅಧಿಕಾರ”, ವಿದ್ವಾಂಸರೊಬ್ಬರ ಮೇಲೆ ಪ್ರಯೋಗವಾಗಿದೆಯೆಂದಾದರೆ, ಅದು ಸದಭಿರುಚಿಯೂ ಅಲ್ಲ; ಮೇಲಧಿಕಾರ ಗಿಟ್ಟಿಸುವ ರಾಜಕೀಯ ಮುತ್ಸದ್ದಿತನವೂ ಎನಿಸುವುದಿಲ್ಲ!
ಹಂಸರಾಜ ಭಾರದ್ವಾಜರು ನಿಜವಾಗಿ, ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾರೆಯೇ?! ಡಾ. ಚಿದಾನಂದಮೂರ್ತಿಯವರ ವಿದ್ವತ್ ಮಹತ್ವದ ಬಗ್ಗೆ ಅವಿರಿಗೇನೂ ಗೊತ್ತಿಲ್ಲದೆ ಇರಬಹುದು; ಆದರೆ ಅವರಿಗೆ ಪ್ರಶಸ್ತಿ ಪ್ರಸ್ತಾಪವನ್ನು ನಿರಾಕರಿಸುವಷ್ಟು ನಕಾಕಾರಾತ್ಮಕ ಮಾಹಿತಿ, ತಿಳುವಳಿಕೆಗಳು, ತಮಗೆ ನಿಜವಾಗಿ ಇದೆಯೇ ಎನ್ನುವುದನ್ನು ಕುಲಾಧಿಪತಿಗಳು ಆತ್ಮಸಾಕ್ಷಿಪೂರ್ವಕವಾಗಿ ತಿಳಿಸಿಕೊಡಬೇಕಾಗುತ್ತದೆ!

Friday, February 4, 2011

ಕನ್ನಡ ಇರಲೆಂಬ “ಭೀಷ್ಮ ವಾಣಿ”!


            ಕನ್ನಡ ನಾಡಿನಲ್ಲಿ ಕನ್ನಡ ಇರಬೇಕು ಎಂದು ಹಿಂದಿನೆಲ್ಲಾ ಸಮ್ಮೇಳನಾಧ್ಯಕ್ಷರುಗಳಂತೆ, ಹಾಲೀ ಅಧ್ಯಕ್ಷರೂ ಭಿಷ್ಮವಾಣಿ ಮೊಳಗಿಸಿದ್ದು (ದ್ರೊಣ, ಅರ್ಜುನ, ಅಭಿಮನ್ಯುಗಳು ಕನ್ನಡಕ್ಕಿಲ್ಲವಲ್ಲ!) ಸ್ವಾಗತಾರ್ಹ. ಆದರದು ನಿಸ್ಸಹಾಯಕವಾಗಿ, ಪ್ರತಿಕ್ರಿಯಾತ್ಮಕವಾಗಿ ಇಂಗ್ಲಿಷ್ ವಿರುದ್ಧ ಹರಿಹಾಯುವ ಅಗತ್ಯವಿರಲಿಲ್ಲ.
            ನಮ್ಮದೆಂಬ ಭಾಷೆಗಿರುವ ಅದರದೇ ವಾಸನೆ, ರುಚಿಗಳನ್ನು ಕಂಡುಕೊಳ್ಳುವ, ಉಳಿಸಿಕೊಳ್ಳಲು ಹಂಬಲಿಸುವ ಉತ್ಕಟತೆಯನ್ನು ವ್ಯಾಪಕವಾಗಿ ಪ್ರಚೋದಿಸುವ ಕೆಲಸ, ನಮ್ಮಲ್ಲಿ ಹಿಂದಿಂದಲೂ ನಡೆದಿಲ್ಲ; ಇಂದಿನ ಸಮ್ಮೇಳನವೆಂಬ ಅಬ್ಬರ, ಆರ‍್ಭಟ ಮತ್ತು ರಾಜಕಾರಣಿಗಳ ಡೌಲಿನಲ್ಲೂ ನಡೆಯುತ್ತಿಲ್ಲ. ನಡೆದಿದ್ದರೆ, ಕನ್ನಡತನವೆಂಬುದು ಹಿಂದೆಲ್ಲಾ ಸಂಸ್ಕೃತಕ್ಕೂ, ನವೋದಯ ಯುಗದಲ್ಲಿ ಇಂಗ್ಲಿಷಿಗೂ ಈಗೀಗ ವ್ಯಾಪಾರೀ ಜನಾಂಗದ ವ್ಯಾವಹರಿಕ ಹಿಂದಿಗೂ ಅಡಿಯಾಳಾಗಿ ಮುಂದುವರೆಯಬೇಕಾದ್ದಿರಲಿಲ್ಲ!
            ನೆಲದ ಮಣ್ಣಿಗೆ ಕನ್ನಡದ ಕಸುವನ್ನೂ, ಕುಡಿಯುವ ನೀರಿಗೆ ಕನ್ನಡತನವನ್ನೂ ಊಡದಿರುವುದರಿಂದಲೇ ನಾವು, ಕನ್ನಡಿರು, ಸಂಸ್ಕೃತಕ್ಕೆ ಭಕ್ತರಾಗಿ, ಇಂಗ್ಲಿಷನ್ನು ಹೀಯಾಳಿಸುತ್ತಾ, ಹಿಂದಿಯನ್ನೋ, ತಮಿಳನ್ನೊ ನೋಡಿ ಹೊಟ್ಟೆ ಉರಿದುಕೊಳ್ಳುತ್ತಾ ಬದುಕುವುದು ಅನಿವಾರ‍್ಯವಾಗಿರುವುದು!
            ಈಗಲಾದರೂ ಮಣ್ಣಿನ ವಿಶಿಷ್ಟತೆ ಉಳಿಸಿಕೊಳ್ಳುವ ಪ್ರಾಮಾಣಿಕತೆ ಮೊಳೆತಿದ್ದರೆ, ಅದಕ್ಕೆ ಕಪಟ ಹೊರಾಟದ ಆರ್ಭಟ ಕೈಬಿಡೋಣ. ಕನ್ನಡ ನಾಡಿನ ಮಕ್ಕಳು, ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಮಾತ್ರಾ ಕಲಿಯುವಂತೆ ಮಾಡೋಣ; ಇಲ್ಲದವರಿಗೆ ಕಲಿತವರೆಂಬ ಅಧೀಕೃತ ಮಾನ್ಯತೆ ನೀಡದಿರೋಣ: ಭೂಗೋಳ, ಚರಿತ್ರೆ, ಗಣಿತ ವಿಜ್ಞಾನಗಳನ್ನು ಕನ್ನಡದಲ್ಲಿ ಮತ್ರಾ ಕಲಿಯುವುದು ಅನಿವರ‍್ಯವಾದರೂ ಭಾಷೆ ಮತ್ತು ಸಾಹಿತ್ಯದ ಓದಿಗೆ, ಅವರವರ ಅಭಿರುಚಿ, ಅಗತ್ಯಗಳಿಗೆ ತಕ್ಕಂತೆ ಕನ್ನಡ, ಉರ್ದು, ಸಂಸ್ಕೃತ, ಇಂಗಿಷ್‌ಗಳಲ್ಲಿ ಅವಕಾಶ ಕಲ್ಪಿಸೋಣ!    

“ಶಾಕಾಯ-ಲವಣಾಯ ಮಾಮೂಲಿ” ಶತಸಹಸ್ರ ಕೋಟಿಯಾಗುವ ಕತೆ!

ಗ್ಯಾಸ್ ಹುಡುಗನಿಗೆ ಐದು ರೂಪಾಯಿ ಎಕ್ಸ್ಟ್ರಾ ಕೊಡುವ, ಗುಡಿಸುವ ಕಾರ‍್ಮಿಕನಿಗೆ ಆಗೊಮ್ಮೆ ಈಗೊಮ್ಮೆ ಹತ್ತು-ಇಪ್ಪತ್ತು ಕೈಲಿಡುವ, ಹೊಟೆಲ್ ಬಿಲ್ ಕಟ್ಟಿದ ಮೇಲೆ ಚಿಲ್ಲರೆ ತಟ್ಟೆಯಲ್ಲಿ ಎರಡು ರೂಪಾಯಿನದೋ, ಐದು ರೂಪಾಯಿನದೋ ಬಿಲ್ಲೆ ಬಿಟ್ಟು ಎದ್ದೇಳುವ ರೂಢಿಗಳೂ, ಸಾವಿರ ಕೋಟಿ-ನೂರು ಸಾವಿರ ಕೋಟಿಗಟ್ಟಲೆ ಭ್ರಷ್ಟ ಹಣಕ್ಕೆ ಬೀಜವೇ? “ಹೌದು” ಎಂಬ ಚಿಂತನೆಯೊಂದು ಪ್ರಕಟವಾಗಿತ್ತು. ಓದಿ ಬೆಚ್ಚಿಬಿದ್ದೆ! ಇದು ನಾನು ಸಹ ದಿನ-ನಿತ್ಯ ಆಚರಿಸುವ “ಭ್ರಷ್ಟಾಚಾರ”! ನಾಳೆ ಈ ಜನ ಇನ್ನೂ ಹೆಚ್ಚಿನ ಆದರದ “ಸರ‍್ವಿಸ್” ಕೊಡಲಿ ಎಂಬ “ಹಿಡನ್’ ಉದ್ದೇಶವೂ ಇದೆಯೋ ಏನೊ; ಆದರೆ ನನ್ನ ಮೇಲ್ಮನಸ್ಸಿನಲ್ಲಿರುವುದು ಮಾನವೀಯತೆಯ ದೃಷ್ಟಿಕೋನವೇ ಎಂದುಕೊಂಡಿದ್ದೇನೆ.
ಇಂತಹ ಚಿಂತನೆ ಸಂಪೂರ್ಣವಾಗಿ ನಿಜವೇ ಅಲ್ಲ ಎಂದೆನೂ ಅಲ್ಲ; ಆದರೂ ನನಗನ್ನಿಸಿದ ಇನ್ನೂ “ನಿಜ”ವಾದ ಸತ್ಯವೆಂದರೆ ನಮ್ಮನ್ನಾಳುವ, ಪ್ರತಿನಿಧಿಸುವ ಪ್ರಜಾಪ್ರಭುಗಳು, ವಿದ್ಯೆ, ಸಂಸ್ಕಾರ ಮತ್ತು ಸಾಂಸ್ಕೃತಿಗಳಲ್ಲಿ, ಬೀದಿ ಗುಡಿಸುವ, ಹೊಟೆಲ್‌ನಲ್ಲಿ ದೊಸೆ ಸಪ್ಲೈ ಮಾಡುವ, ಗ್ಯಾಸ್ ಹೊತ್ತು ತಂದು ಹಾಕುವ ಅಣ್ಣಗಳಿಗಿಂತಾ ಎಷ್ಟೂ ಮೇಲ್ಮಟ್ಟದವರಾಗಿರುವುದಿಲ್ಲ, ಎನ್ನುವುದು!
ಬಡವ, ಮಕ್ಕಳೊಂದಿಗ ಜವಾನನೋ, ಕೆಳ ಗುಮಾಸ್ತಾನೊ ಹತ್ತಿಪ್ಪತ್ತು ಬೇಡಿದಾಗ ಅನುಕಂಪಿಸಿದರೆ ನೀವೇನೂ ಕಳಕೊಳ್ಳುವುದಿಲ್ಲ; ಸ್ವಲ್ಪ ಮೇಲ್ಮಟ್ಟದವರ ಇಪ್ಪತ್ತೈದು-ಐವತ್ತರ ಲಂಚವೂ ಸಹಿಸಿಕೊಳ್ಳಲಾರದ್ದಲ್ಲ. ನಮ್ಮ ನೈತಿಕತೆಯ ಲೂಟಿಯಾಗುತ್ತಿರುವುದು ಅನಾದಿ ಕಾಲದ ಈ “ಮಾಮೂಲಿ”ಯಿಂದಲೂ ಅಲ್ಲ. ಅದು ಸಹಸ್ರಗಟ್ಟಲೆ, ಲಕ್ಷಗಟ್ಟಲೆ ಆಗಿ ಮ್ಯಾನೆಜರು, ಚಿಕ್ಕ ಸಹೇಬರು, ದೊಡ್ಡ ಸಾಹೇಬರು, ಅತಿ ದೊಡ್ಡ ಸಾಹೇಬರ ಮುಖಾಂತರ ಮೂಲಕ ಮಂತ್ರಿ ಮಹೊದಯರ ಪದತಲದವರೆಗೂ ತಲುಪುವುದು! ಈ ಜೇನಳೆದವರು ಕೈ ನೆಕ್ಕಿಕೊಳ್ಳುತ್ತಾರೆ; ಅಲ್ಲಿ ಆ ಅವರು, ತಮ್ಮ ಮತ್ತು ತಮ್ಮವರ ಹಿತರಕ್ಷಣೆಯ ಖಾಸಗೀ ಸೇನೆಯನ್ನೂ, ಸಲಹೆಗಾರ ಹಿತಚಿಂತಕರನ್ನೂ ಇದರಿಂದಲೇ ಸಾಕಿಕೊಳ್ಳಬೇಕಾಗುತ್ತದೆ; ಅಲ್ಲದೆ ಚುನಾವಣೆಯಲ್ಲಿ ಪ್ರತಿ ವೋಟಿಗೆ ಹೂಡುವ ಬಂಡವಾಳವೇನೂ ಕಡಿಮೆ ಮೊತ್ತದ್ದಾಗಿರುವುದಿಲ್ಲ! ಇಷ್ಟಾದಮೇಲೆ ಕುದುರೆ ವ್ಯಾಪಾರ, ರೆಸಾರ್ಟ್‌ ವ್ಯವಹಾರ ಇತ್ಯಾದಿಗಳಿಗಾಗಿ ಪಾರ್ಟಿ ಫಂಡಿಗೂ ಲಕ್ಕಕ್ಕೆ ಸಿಗದಷ್ಟು, ಲೆಕ್ಕಕ್ಕೆ ಸಿಗದಂತೆ ವಂತಿಕೆ ಸಲ್ಲಿಸಬೇಡವೇ?!
ಈ ಪ್ರಜಾಭುತ್ವದಲ್ಲಿ, ಪ್ರಜಾಕೊಟಿಯಲ್ಲದೆ ಇದನ್ನೆಲ್ಲಾ ಇನ್ನು ಯಾರು ತಾನೇ ಭರಿಸಬೇಕು! ಹೀಗೆನ್ನುವ ತರ್ಕ, ಕೈಲಾಗದ ಹೇಡಿಗಳ ಪಲಾಯನವಾದವಲ್ಲ; ರಾಜಕಾರಣಿಗಳು ಮಾಡಿಟ್ಟಿರುವ “ಕಾಯ್ದೆಬದ್ಧ ಕರಾಮತ್ತೇ” ಆಗಿದೆ!

Wednesday, February 2, 2011

ರಾಜಾ ಬಂಧನ

            ಮಾಜಿ ಸಚಿವ ಎ. ರಾಜಾ ಬಂಧನ ಒಂದು ರಾಜಾ ಬಂಧನವೇ ಹೌದು; ಇಂಗ್ಲಿಇಷ್‌ನಲ್ಲಿ ಹೇಳುವಂತೆ ಉಡಿeಚಿಣ!
            ತಾವು ಆಯ್ಕೆಯಾದ ಸಂಸತ್ತೇ ಇನ್ನೂ ಅಸ್ತಿತ್ವದಲ್ಲಿರುವಾಗಲೇ, ತಾವು ದರ‍್ಬಾರು ನಡೆಸಿದ ಅದೇ ಸರಕಾರ ಮಂತ್ರಿಮಂಡಲಗಳು ಇನ್ನೂ ಜಾರಿಯಿರುವಾಗಲೇ, ಲಂಚದ ಆರೋಪಿ ಮಾಜಿ ಮಂತ್ರಿ, ಕ್ರಿಮಿನಲ್ ಆರೋಪದ ಮೇಲೆ ಬಂಧಿತರಾದದ್ದು, ಪ್ರಜಾಸತ್ತೆಯ ಸಮಾಧಾನದ ನಿಟ್ಟುಸಿರೆನ್ನಬಹುದು. ಇದು, ಮಾಹಿತಿ ಹಕ್ಕು ಕಾಯ್ದೆ, ಎಚ್ಚೆತ್ತಿರುವ ಮಾಧ್ಯಮ ಮತ್ತು ವ್ಯಾಪಕ ಸಂಪರ್ಕ ಕ್ರಾಂತಿಯ ಧನ್ಯತೆಯೂ ಹೌದು! ತಾವು ಮಾಡಿದ ಪಾಪ, ತಮ್ಮ ಅಧಿಕಾರವಧಿಯಲ್ಲಿರಲಿ, ಇಡೀ ಜೀವಿತಾವಧಿಯಲ್ಲೇ ಫಲ ನೀಡದಂತೆ ಆಡಳಿತದಲ್ಲಿ ನಿಧಾನವನ್ನೇ ಪ್ರಧಾನ ಮಾಡಿಕೊಳ್ಳುವ ಹೇಬ್ರೆಸೀ ರಾಜಕೀಯವೇ ಇನ್ನಾದರೂ ಎದ್ದೇಳಬೆಕಾಗಿದೆ; ಈ ರಾಜ್ಯ, ಮತ್ತಿತರ ರಾಜ್ಯಗಳ ಮುಖ್ಯಮಂತ್ರಿ ಮತ್ತವರ ಚೇಲ-ಬಾಲಗಳಿಗೂ ಇದು ಅಲಾರಾಂ ಆದೀತೇ?!

Tuesday, February 1, 2011

ಮುಖ್ಯಮಂತ್ರಿಗೆ ಮಾಟ-ಮಂತ್ರ

        ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ‘ಕೊಲ್ಲಲು’, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾಟ-ಮಂತ್ರ ಮಾಡಿಸಿದ್ದಾರಂಬ ಆರೋಪ, ಡಂಗೂರವಾಗಿ ಕೇಳಿಬಂದಿದೆ. ಸಿದ್ದರಾಮಯ್ಯನವರು ಈ ಹಿಂದೆ ದೇವೇಗೌಡರ ಪಟ್ಟಶಿಷ್ಯರಾಗಿದ್ದವರು; ಗೌಡರು ಇಂಥ ಕಲೆಯಲ್ಲಿ ನುರಿತ ಪಟು ಎನ್ನುವ ಶಂಕೆ, ಅರೋಪದ ಹಿಂದಿನ ತರ್ಕಶಾಸ್ತ್ರ!
ಯಡಿಯೂರಪ್ಪನವರೂ, ಸಿದ್ದರಾಮಯ್ಯನವರೂ ಸಂವಿಧಾನದ ಪ್ರಕಾರವಾಗಿಯೇ ಅವರವರ ಉನ್ನತ ಸ್ಥಾನಗಳನ್ನು ಗಿಟ್ಟಿಸಿದವರು. ತಥಾಕಥಿತ ಮಾಟವನ್ನು ಸಿದ್ದರಾಮಯ್ಯನವರು ಸಾಂವಿಧಾನಿಕ ಜವಾಬ್ದಾರಿಯಿಂದಲೇ ಮಾಡಿದ್ದಾರೆಯೇ? ಹಾಗಾದರೆ, ಯಡಿಯೂರಪ್ಪನವರು ಹೈಕೋರ್ಟ್-ಸುಪ್ರೀಂರ್ಟ್‌ಗಳಿಂದ ಅದಕ್ಕೆ ತಡೆಯಾಜ್ಞೆ ತರುವ ಪ್ರಯತ್ನವನ್ನೂ ಮಾಡಿಯಾರೇ?!
        ಸಿದ್ದರಾಮಯ್ಯ ಎಂಬ ಒಬ್ಬರಿಗೆ ಯಡಿಯೂರಪ್ಪ ಎನ್ನುವವರ ಜತೆ ಬಡ್ಡೀ ವ್ಯವಹಾರದ ಅಥವಾ ಆಸ್ತಿ ಹಂಚಿಕೆ ವ್ಯವಹಾರದ ಸರಸ-ವಿರಸಗಳ ಸಂಬಂಧವಿರುತ್ತಿದ್ದರೆ, ಆ ವ್ಯಕ್ತಿಗತ ಹಂತದಲ್ಲಿ ಪರಸ್ಪರರು ಮಾಟಮಾಡಿಸಿದರೆ, ಮಂತ್ರ ಹಾಕಿಸಿಕೊಂಡರೆ, ಅದು ಅವರವರ ವಿದ್ಯಾ ಸಂಸ್ಕಾರದ ಮಟ್ಟಕ್ಕೆ ತಕ್ಕಂತಿರುತಿತ್ತು; ನಾವು, ಸಾರ‍್ವಜಕನಿಕರು ತಲೆ ಕೆಡಿಸಿಕೊಳ್ಳಬೇಕಾದ್ದೇನು ಇರುತ್ತಿರಲಿಲ್ಲ. ಆದರೆ ಅವರುಗಳು ಕ್ರಮವಾಗಿ, ನಾಡಿನ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕರಾಗಿರುವುದರಿಂದ ನಮ್ಮ ಸಂಬಂಧ. ಈ ಜವಾಬ್ದರಿಯಲ್ಲಿವರು ಕೋಟಿ-ಕೋಟಿ ಪ್ರಜೆಗಳ, ಅಂದರೆ ವೋಟು ಹಾಕುವ ನಮ್ಮ, ಪ್ರತ್ಯೇಕ ಹಿತಾಸಕ್ತಿಗಳನ್ನು ಪ್ರತಿಪಾದಿಸುವವರು; ಪ್ರತಿನಿಧಿಸುವವರು. ಅದಕ್ಕಾಗಿಯೇ ಇವರು, ಒಂದು ಕಾಲಾವಧಿಯವರೆಗೆ, ವಿಧಾನಸೌಧ, ವಿಕಾಸಸೌಧ, ಮಿನಿಸೌಧಗಳನ್ನು ತುಂಬಿಕೊಳ್ಳುವುದು! ಆದರೆ ಅವೆಲ್ಲಾ ಶಾಶ್ವತ ಪಿತ್ರಾರ್ಜಿತ, ಸ್ವಯಾರ್ಜಿತ ಸ್ವತ್ತೊ ಎಂದು ಮುತ್ಸದ್ದಿ ಮಹೋದಯರು ಸಂಭ್ರಮಿಸುತ್ತಾರೆ; ಅದೇ ಸರಿ ಎಂದು ನಾವೂ ಕ್ಷಣಕಾಲ ಭ್ರಮಿಸುತ್ತೇವೆ! ಇದು ದುರ್ದೈವ!.