Sunday, August 28, 2011

ಮೂಢನಂಬಿಕೆ ಗೆದ್ದಿತು!

 ಅಗಸ್ಟ್ ೨೮ ಅಮಾವಾಸ್ಯೆ, ಭಾನುವಾರ ೧೦ ಗಂಟೆ ಸುಮಾರಿಗೆ ಅಣ್ಣಾ ಹಜ಼ಾರೆ ಗುಟುಕು ಷರಬತ್ ಸ್ವೀಕರಿಸುವುದರೊಂದಗೆ ಗೆದ್ದಿದ್ದು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪೀ ಆಂದೋಳನವಲ್ಲ, ಸತ್ಯ-ಧರ್ಮಗಳಲ್ಲ, ದೇಶದ ಆತ್ಮಸಾಕ್ಷಿಯೂ ಅಲ್ಲ. ಅದು ಕೇವಲ ಮೂಢನಂಬಿಕೆ!
 ರಾಜಕೀಯದ ಬ್ಲಾಕ್‌ಮೇಲಿಗಂಜಿ ಪಾರ್ಲಿಮೆಂಟ್ ತರಾತುರಿಯಲ್ಲಿ, ಜನಲೋಕಪಾಲವೆಂಬ ಮಸೂದೆಗೆ ಹೂಂಗುಟ್ಟಿದೆ. ಅದು ಇನ್ನೂ ಪರಿಷ್ಕಾರಗೊಂಡು, ಕಾಯ್ದೆ-ಕಾನೂನಿನ ಕರಡು ಸಿದ್ಧವಾಗಿ, ಲೋಕಸಭೆ-ರಾಜ್ಯಸಭೆಗಳಲ್ಲಿ ಪಾಸಾಗಿ ರಾಷ್ರ್ಟಪತಿಗಳ ರುಜು ಪಡೆದು ತಜ್ಞರಿಂದ ಕಾನೂನು-ಕಲಮುಗಳನ್ನಂಟಿಸಿಕೊಂಡು ಜಾರಿಯಾಗುವ ಹೊತ್ತಿಗೆ, ಈಗ ಜೈಕಾರ-ಧಿಕ್ಕಾರಗಳನ್ನು ಹಾಕಿದ ಉತ್ಸಾಹಿಗಳು ಅದನ್ನೆಷ್ಟು ನೆನಪಿಟ್ಟುಕೊಂಡಿರುತ್ತಾರೋ? ಗೊತ್ತಿಲ್ಲ!
 ಭ್ರಷ್ಟಾಚಾರದಿಂದಾಗಿ ಇಡೀ ರಾಷ್ಟ್ರ ಸಮುದಾಯವೇ ಬೇಸತ್ತುಹೋಗಿದೆ ಎನ್ನುವುದೆನೋ ಈ ಅಭೂತಪೂರ್ವ ಆಂದೋಳನದಿಂದ ಧೃಢಪಟ್ಟಿದೆ. ಜನ ಯಾವುದೇ ’ಇಸಂ’ ಮತ್ತು ಆಸಾಮಿಗಳಲ್ಲೂ ನಂಬಿಕೆ ಕಳೆದುಕೊಂಡಿದ್ದಾರೆನ್ನುವುದೂ ಸಾಬೀತಾಗಿದೆ. ಆದರೂ ಧೂರ್ತ ರಾಜಕಾರಣಿಗಳು ಜನಲೋಕಪಾಲದ ಬೆದರುಬೊಂಬೆಗಂಜಿ ಸಭ್ಯರಾಗಿಬಿಡುತ್ತಾರೆಂದು ನಂಬುವುದು ಬಾಲಿಶವೇ ಆಗುತ್ತದೆ!
 ಉಪಾಸದಿಂದ ಕುಗ್ಗಿದ ದನಿಯಲ್ಲಿ ಅಣ್ಣಾ ಕೊಟ್ಟ ಧೀಮಂತ ಕರೆಯಾದರೂ ಏನು? ’ಜನಲೋಕಪಾಲ ಮಸೂದೆ ವಿರೋಧಿಸುವವರನ್ನು ಮತ್ತೆ ಆರಿಸಬೇಡಿ’ ಎಂದು. ಈಗ ಮಸೂದೆ ಸರ್ವಾನುಮತದಿಂದ ಪಾಸಾಗಿದೆ; ಈಗಿನವರೆಲ್ಲರೂ ಪುನರಾಯ್ಕೆಗೆ ಅರ್ಹರೇ. ರಾಜಾಗಳು, ಕಲ್ಮಾಡಿಗಳು, ಕನ್ನಿಮೊಳಿಗಳೂ ಸಹ!
 
 ಪಾರ್ಲಿಮೆಂಟಿನಲ್ಲಾಗಲೀ, ಶಾಸನಸಭೆಗಳಲ್ಲಾಗಲೀ ವೊಟ್ ಹಾಕುವ ಜನತೆಯ ನಿಜವಾದ ಬಹುಮತದ ಪ್ರಾತಿನಿಧ್ಯವಾಗದಿರುವುದು ಭ್ರಷ್ಟಾಚಾರದ ಮೂಲಕಾರಣ. ಅದನ್ನು ಸುಧಾರಿಸದೆ, ಯಾರೋ ಸರ್ವಾಧಿಕಾರಿ ಬಂದು ಲಂಚಕೋರರನ್ನು ಗಲ್ಲಿಗೇರಿಸಲಿ ಎಂದು ಬಯಸುವುದು ರಾಷ್ಟ್ರೀಯ ಮೂಢನಂಬಿಕೆ!

Monday, August 8, 2011

ರಾಯರ ಆರಾಧನೆಗೊಂದು Dress-code ಮನವಿ

ಗುರು ರಾಘವೇಂದ್ರ ಸಾರ್ವಭೌಮರ (ಹಾಗೆಂದು ನಾಡಾಡೀ ಭಾವುಕ ಭಕ್ತರು ಕರೆಯುತ್ತಾರೆ; ಇದರ ಸದರ್ಥ ವಿವರಣೆಯಿರಲಿ, ರಾಯರ ಬಗ್ಗೆಯೇ ನೈಜ ಗೌರವ ಉಂಟುಮಾಡುವ ಯಾವ ಗೋಜಿಗೂ “ವಿದ್ವಾಂಸರು” ಹೋಗುವುದಿಲ್ಲ!) ಆರಾಧನೆ ಇನ್ನೇನು ಬಂದೇಬಿಟ್ಟಿದೆ. ಕಾಮಧೇನು, ಕಲ್ಪವೃಕ್ಷ, ಅಪೇಕ್ಷಿತ ಪ್ರದಾತರೆಂಬೆಲ್ಲಾ ಪ್ರಭಾವಳಿಯನ್ನು ಆ ಮಹನೀಯರ ಸುತ್ತಾ ಹಬ್ಬಿ ಹರಡಿಸಲಾಗಿದೆ. ಊರೂರ ಕೇರಿ-ಕೇರಿ “ಮಠ”ಗಳಲ್ಲಿ ಬ್ಯಾನರ್ ತೂಗುಕಟ್ಟಿ ಭರ್ಜರಿ Collection ಮಾಡಲಾಗುತ್ತಿದೆ. ಮಾಡಿಕೊಳ್ಳಲಿ; ಬೇಡವೆನ್ನುವುದಿಲ್ಲ. ಆದರೆ ಉದ್ಧರಣೆ ತಿಳಿ ಪಂಚಾಮೃತ, ಚಮಚೆ ಹಯಗ್ರೀವ ಸೇವನೆ ಮಾತ್ರದಿಂದ ತಮ್ಮ  ಜನ್ಮ-ಜನ್ಮಾಂತರದ ಪಾಪಗಳು ತೊಡೆದುಹೋಗುತ್ತದೆಂದುಕೊಳ್ಳುವ ಮುಗ್ಧರ ಬಗ್ಗೆ “ಪಾಪ”  ಎನಿಸುತ್ತದೆ! ರಾಯರ ಗುರು-ಗುರು-ಗುರುವರೇಣ್ಯರ ಮೂಲ ಗುರುಗಳ “ಕುರು-ಭುಂಕ್ಷ್ವ” ಮತ್ತು “ಹರಿಪಾದ ವಿನಂಮ್ರತಾ”  “ಸತ್ಯ”ವನ್ನು, ಸಂದರ್ಭಕ್ಕೆ ತಕ್ಕಂತೆ ಜಾತ್ಯತೀತವಾಗಿ ಜನತೆಗೆ ಮನದಟ್ಟು ಮಾಡಿಸುವ ವೈಶಾಲ್ಯತೆ, ಪಂಡಿತೋಮೋತ್ತಮರಲ್ಲಿ ಕಂಡುಬರುವುದಿಲ್ಲ; ಅವರವರ ಬೆಳ್ಳಿ ಚೊಂಬು, ಪಂಪಾತ್ರೆ-ಉದ್ಧರಣೆ, ಪಟ್ಟೆ ಜರತಾರಿ ಧೋತ್ರ ಜೋಡಿಯ “ಅಲಂಕಾರ”ದ ಚಿಂತೆಯಲ್ಲವರಿರುತ್ತಾರೆ!
ಅದು ಹೇಗಾದರಾಗಲಿ; ಅವರವರ “ಪಾಪಪ್ರಜ್ಞೆ”ಗೆ ಬಿಟ್ಟ ವಿಚಾರ. ಈ ಸಂದರ್ಭದಲ್ಲಿ ಒಂದು ವಿನಮ್ರ ಮನವಿ. ಅದು ಯತಿತ್ವದ ಯತಿ ಆಶಿರ್ವಾದದ ಮಹತ್ವ ಕಪಾಡುವ ಬಗ್ಗೆ. ಜಪತಪಾನುಷ್ಠಾನ ನಿರತ ಯತಿ-ಯೋಗಿಗಳು ಸದ್ಗೃಹಸ್ಥರ ಸದಾಚಾರಕ್ಕೆ ಮೆಚ್ಚಿ, ತಾವು ಉಪಯೋಗಿಸಿದ ಕಾವಿವಸ್ತ್ರ ಹೊದೆಸುತ್ತಿದ್ದ ಕಾಲವಿತ್ತು. ಇದಕ್ಕೆ “ಶೇಷವಸ್ತ್ರ” ಎಂಬ ಮಹತ್ವ ಕೊಡಲಾಗುತ್ತಿತ್ತು. ಯತಿವರೇಣ್ಯರ ಭಿಕ್ಷಾ-ಪಾದಪೂಜಾ ಸಂದರ್ಭದಲ್ಲಿ, ಉತ್ತಮ ಹತ್ತಿ ಬಟ್ಟೆಯ ದಟ್ಟಿ ಮತ್ತು ಹೊದೆವಸ್ತ್ರವನ್ನು ಕೆಮ್ಮಣ್ಣಿನ ಕಾವಿಯಲ್ಲಿ ನೆನೆಸಿ ಮಡಿ ಮಾಡಿ ನಿವೇದಿಸುವ ಶ್ರದ್ಧೆ ಹಿಂದೆಲ್ಲಾ ಇತ್ತು. ಈಗಲಾದರೊ ಮಿರಿ-ಮಿರಿ ಮಿಂಚುವ ಕೃತಕ ಕನಕಾಂಬರ ವಸ್ತ್ರ-ಧೋತ್ರಗಳು ಎಲ್ಲಾ ಸೀರೆಯಂಗಡಿಗಳಲ್ಲೂ ಸಿಕ್ಕುತ್ತವೆ. ಅಂಥವುಗಳನ್ನೇ ತಂದು ಮುರಿಗೆ ಹಿಡಿದು ಕೊಡುವುದೇ ಇಂದಿನ ಪರಿಪಾಠ. ಅದನ್ನು “ಸ್ವಾಮಿಗಳು” ಉಟ್ಟು ಮರೆಯುತ್ತಾರೆ ಸಹ. ಭಾರೀ ಮೊತ್ತದ ಸೇವೆ ಮಾಡಿಸುವ ಭಕ್ತಾದಿಗಳಿಗೆ ಅಗ್ಗದ “ಪೊನ್ನಾಡೆ” ಹೊದ್ದಿಸಿ ಮರ್ಯಾದೆ ಮಾಡುವುದೂ ಈಗ ಚಿಕ್ಕ-ಪುಟ್ಟ ಗುಡಿಗಳಲ್ಲೂ ರೂಢಿಯಾಗಿದೆ. ಹೋಗಲಿ, ಅದಕ್ಕೂ “ಶೇಷವಸ್ತ್ರ”ದ ಗೌರವವನ್ನೇ ಕೊಡೋಣ.
ಆದರೆ ಸಿಲ್ಕ್ ಸೀರೆಯಂಥಾ ಪೀತಾಂಬರಗಳನ್ನು ಗೃಹಸ್ಥರೂ, ವಟುಗಳೂ, ಮಕ್ಕಳೂ ಸೊಂಟದ ಕೆಳಗೂ ಸುತ್ತಿಕೊಂಡು, ಮಠಗಳಲ್ಲೂ ಆರಾಧನೆಗಳಲ್ಲೂ ಸರ-ಪರ ಓಡಾಡುವುದು ಜಿಗುಪ್ಸೆ ತರುತ್ತದೆ. ಕೆಲ ಸಂದರ್ಭಗಳಲ್ಲಂತೂ “ಶ್ರೀಪಾದರು” ಯಾರು, ಸೇವಕರು ಯಾರು, ಆಢ್ಯತೆಯ ಆಡಂಬರದ “ಗೃಹಸ್ಥ ಯಜಮಾನರು”ಗಳು ಯಾರು ಎಂದು ಗುರ್ತಿಸುವುದೂ ಕಷ್ಟವಾಗಿಹೋಗುತ್ತದೆ!
ಆದ್ದರಿಂದ ಯತಿ, ಸಂನ್ಯಾಸಿ, ಪೀಠಾಧಿಪತಿಯಲ್ಲದವರು ಕಾಷಾಯ ಅಥವಾ ಇತರ “ಹೆಂಗಸರ ಬಣ್ಣ”ದ ಧೋತ್ರಗಳನ್ನುಡದೆ ಸರಳ ಪಂಚೆಯ ಕಚ್ಚೆ ಅಥವಾ ಎರಡು ಮಡಿಕೆ ದಟ್ಟಿಯನ್ನುಟ್ಟು ಸಂಭ್ರಮಿಸಿ, ಸಹಕರಿಸಿಸದರೆ, ಯತಿ ಮರ್ಯಾದೆ ಕಾಪಾಡಿದಮತಾಗುತ್ತದೆಂದು ಒಂದು ವಿನಂಮ್ರ ಅರಿಕೆ!

Friday, August 5, 2011

’ಬಲಿಷ್ಠ ಲೋಕಪಾಲ’ - ಯಾವ ಅರ್ಥದಲ್ಲಿ?

                 ದೇಶದಲ್ಲಿನ ಭ್ರಷ್ಟಾಚಾರ ತೊಡೆದುಹಾಕಲು ಬಲಿಷ್ಠ ಲೋಕಪಾಲಬೇಕೆಂಬುದು ಬಹುಮಂದಿ ಮುಗ್ಧರ ಅಶಯ  ಆದರಿದು ಕುರುಡು ನಂಬಿಕೆ. ಹಾಗೆಂದು ಬಿಡಿಸಿ ಹೇಳಿದರೂ ಯಾರೂ ಏಕೆ ನಂಬದಿರುವುದು ದುರ್ದೈವ!

                ಬಲಿಷ್ಠ ಲೋಕಪಾಲದ ಆಸೆ ಬಾಲಿಶ. ಪರೋಕ್ಷವಾಗಿ ಇದು, ’ಮಿಲಿಟರಿ ದಂಡನಾಯಕನೊಬ್ಬ ದೇಶವನ್ನಾಳಲಿಎಂಬ ಬಯಕೆಯೇ ಆಗುತ್ತದೆ!

                ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಬೊಬ್ಬೆ ಹಾಕುವ ಅಣ್ಣಗಳ್ಯಾರೂ ದೇಶದ ಪ್ರಜಾಸತ್ತೆಯ ಬೇರುಗಳನ್ನು ಬಲಪಡಿಸುವತ್ತ ಆಲೋಚಿಸುತ್ತಿಲ್ಲ; ಬದಲಿಗೆ ಪ್ರಜಾಸತ್ತೆ ಹೆಸರಿನಲ್ಲಿ ದರೋಡೆ ಮಾಡುತ್ತಿರುವ ತಲೆಹಿಡುಕರ ವಿರುದ್ಧ ಸಾತ್ವಿಕ ರೋಷದ ಜ್ವಾಲೆ ಎಬ್ಬಿಸಿ ಅದರಲ್ಲಿ ಕಾಗದದ ತುಂಡುಗಳನ್ನು ಸುಟ್ಟುಹಾಕುತ್ತಿದ್ದಾರೆ, ಅಷ್ಟೆ!

                ನಮ್ಮ ಶಾಸನಸಭೆಗಳು ಮತ್ತು ಸಂಸತ್ತು, ಅವುಗಳು ಮುಂದುಮಾಡುವ ಮುಖ್ಯಮಂತ್ರಿ - ಪ್ರಧಾನ ಮಂತ್ರಿ ಮತ್ತವರ ಸಂಪುಟಗಳೇ ನಿಜವಾದ ಅರ್ಥದಲ್ಲಿ ಲೋಕಪಾಲ ಅಂದರೆ ಪ್ರಜೆಗಳನ್ನು ರಕ್ಷಿಸುವವರು ಆಗಬೇಕು. ಅವರಮೇಲಿನ್ನೊಬ್ಬನೆಂದರೆ ಅದು ಒಬಾಮನೋ, ಒಸಾಮನೊ ಆಗಬೇಕಷ್ಟೆ!

                ರಾಜಾಗಳು, ಕಲ್ಮಾಡಿಗಳು, ಯಡಿಯೂರಪ್ಪಾದಿಗಳೆಲ್ಲಾ ಪ್ರಸ್ತುತ ವ್ಯಾಖ್ಯೆಯಲ್ಲಿ ಪ್ರಜಾಪ್ರನಿಧಿಗಳೇ! ಇವರು ನಡೆಸಿರುವ ಆಡಳಿತವೆಲ್ಲಾ ಜನಾದೇಶದ ಮೇರೆಗೇ! ಆದರದು ಎಷ್ಟು ಜನರ ಆದೇಶಎಂದು ಯಾರಾದರೂ ಗಂಭೀರವಾಗಿ ಲೆಕ್ಕ ಹಾಕಿದ್ದಾರೆಯೇ? ದೇಶದ ಶಾಸನಸಭೆಗಳಾಗಲೀ, ಸಂಸತ್ತಾಗಲೀ ಓಟು ಹಾಕಿದವರ ಸರಾಸರಿ ಎಷ್ಟು ಪ್ರತಿಶತವನ್ನು ಪ್ರತಿನಿಧಿಸುತ್ತವೆ? ಅದರಲ್ಲಿ ಪಕ್ಷಗಳು, ಅವುಗಳಲ್ಲೂ ಭಿನ್ನಮತ-ಗುಂಪುಗುಳಿತನ! ಇದೆಂಥಾ ಜನಾದೇಶ? ಯಾವರ್ಥದಲ್ಲಿ ಪ್ರಜಾಪ್ರಭುತ್ವ?

                ಸಂಸತ್ತು/ಶಾಸನಸಭೆಗಳು ಕಡ್ಡಾಯವಾಗಿ ಕನಿಷ್ಠ ಶೇ. ೫೦ರಷ್ಟು  ಪ್ರಜ್ಞಾವಂತ ಮತದಾರರನ್ನಾದರೂ ಪ್ರತಿನಿಧಿಸಬೇಕು. ಹಾಗಾದಾಗ ಅವು, ತಾವೇ ಜವಾಬ್ದಾರಿಯುತವಾಗಿ ವರ್ತಿಸಬೇಕಾದ್ದು ಅನಿವಾರ‍್ಯವಾಗುತ್ತದೆ. ನಮ್ಮ ಒತ್ತಾಯ, ಆಂದೋಳನ, ಉಪವಾಸಗಳು ಈ ನಿಟ್ಟಿನಲ್ಲಾದರೆ ಸಾಧುವಾದಿತು.