Sunday, August 28, 2011

ಮೂಢನಂಬಿಕೆ ಗೆದ್ದಿತು!

 ಅಗಸ್ಟ್ ೨೮ ಅಮಾವಾಸ್ಯೆ, ಭಾನುವಾರ ೧೦ ಗಂಟೆ ಸುಮಾರಿಗೆ ಅಣ್ಣಾ ಹಜ಼ಾರೆ ಗುಟುಕು ಷರಬತ್ ಸ್ವೀಕರಿಸುವುದರೊಂದಗೆ ಗೆದ್ದಿದ್ದು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪೀ ಆಂದೋಳನವಲ್ಲ, ಸತ್ಯ-ಧರ್ಮಗಳಲ್ಲ, ದೇಶದ ಆತ್ಮಸಾಕ್ಷಿಯೂ ಅಲ್ಲ. ಅದು ಕೇವಲ ಮೂಢನಂಬಿಕೆ!
 ರಾಜಕೀಯದ ಬ್ಲಾಕ್‌ಮೇಲಿಗಂಜಿ ಪಾರ್ಲಿಮೆಂಟ್ ತರಾತುರಿಯಲ್ಲಿ, ಜನಲೋಕಪಾಲವೆಂಬ ಮಸೂದೆಗೆ ಹೂಂಗುಟ್ಟಿದೆ. ಅದು ಇನ್ನೂ ಪರಿಷ್ಕಾರಗೊಂಡು, ಕಾಯ್ದೆ-ಕಾನೂನಿನ ಕರಡು ಸಿದ್ಧವಾಗಿ, ಲೋಕಸಭೆ-ರಾಜ್ಯಸಭೆಗಳಲ್ಲಿ ಪಾಸಾಗಿ ರಾಷ್ರ್ಟಪತಿಗಳ ರುಜು ಪಡೆದು ತಜ್ಞರಿಂದ ಕಾನೂನು-ಕಲಮುಗಳನ್ನಂಟಿಸಿಕೊಂಡು ಜಾರಿಯಾಗುವ ಹೊತ್ತಿಗೆ, ಈಗ ಜೈಕಾರ-ಧಿಕ್ಕಾರಗಳನ್ನು ಹಾಕಿದ ಉತ್ಸಾಹಿಗಳು ಅದನ್ನೆಷ್ಟು ನೆನಪಿಟ್ಟುಕೊಂಡಿರುತ್ತಾರೋ? ಗೊತ್ತಿಲ್ಲ!
 ಭ್ರಷ್ಟಾಚಾರದಿಂದಾಗಿ ಇಡೀ ರಾಷ್ಟ್ರ ಸಮುದಾಯವೇ ಬೇಸತ್ತುಹೋಗಿದೆ ಎನ್ನುವುದೆನೋ ಈ ಅಭೂತಪೂರ್ವ ಆಂದೋಳನದಿಂದ ಧೃಢಪಟ್ಟಿದೆ. ಜನ ಯಾವುದೇ ’ಇಸಂ’ ಮತ್ತು ಆಸಾಮಿಗಳಲ್ಲೂ ನಂಬಿಕೆ ಕಳೆದುಕೊಂಡಿದ್ದಾರೆನ್ನುವುದೂ ಸಾಬೀತಾಗಿದೆ. ಆದರೂ ಧೂರ್ತ ರಾಜಕಾರಣಿಗಳು ಜನಲೋಕಪಾಲದ ಬೆದರುಬೊಂಬೆಗಂಜಿ ಸಭ್ಯರಾಗಿಬಿಡುತ್ತಾರೆಂದು ನಂಬುವುದು ಬಾಲಿಶವೇ ಆಗುತ್ತದೆ!
 ಉಪಾಸದಿಂದ ಕುಗ್ಗಿದ ದನಿಯಲ್ಲಿ ಅಣ್ಣಾ ಕೊಟ್ಟ ಧೀಮಂತ ಕರೆಯಾದರೂ ಏನು? ’ಜನಲೋಕಪಾಲ ಮಸೂದೆ ವಿರೋಧಿಸುವವರನ್ನು ಮತ್ತೆ ಆರಿಸಬೇಡಿ’ ಎಂದು. ಈಗ ಮಸೂದೆ ಸರ್ವಾನುಮತದಿಂದ ಪಾಸಾಗಿದೆ; ಈಗಿನವರೆಲ್ಲರೂ ಪುನರಾಯ್ಕೆಗೆ ಅರ್ಹರೇ. ರಾಜಾಗಳು, ಕಲ್ಮಾಡಿಗಳು, ಕನ್ನಿಮೊಳಿಗಳೂ ಸಹ!
 
 ಪಾರ್ಲಿಮೆಂಟಿನಲ್ಲಾಗಲೀ, ಶಾಸನಸಭೆಗಳಲ್ಲಾಗಲೀ ವೊಟ್ ಹಾಕುವ ಜನತೆಯ ನಿಜವಾದ ಬಹುಮತದ ಪ್ರಾತಿನಿಧ್ಯವಾಗದಿರುವುದು ಭ್ರಷ್ಟಾಚಾರದ ಮೂಲಕಾರಣ. ಅದನ್ನು ಸುಧಾರಿಸದೆ, ಯಾರೋ ಸರ್ವಾಧಿಕಾರಿ ಬಂದು ಲಂಚಕೋರರನ್ನು ಗಲ್ಲಿಗೇರಿಸಲಿ ಎಂದು ಬಯಸುವುದು ರಾಷ್ಟ್ರೀಯ ಮೂಢನಂಬಿಕೆ!

No comments:

Post a Comment