Monday, August 8, 2011

ರಾಯರ ಆರಾಧನೆಗೊಂದು Dress-code ಮನವಿ

ಗುರು ರಾಘವೇಂದ್ರ ಸಾರ್ವಭೌಮರ (ಹಾಗೆಂದು ನಾಡಾಡೀ ಭಾವುಕ ಭಕ್ತರು ಕರೆಯುತ್ತಾರೆ; ಇದರ ಸದರ್ಥ ವಿವರಣೆಯಿರಲಿ, ರಾಯರ ಬಗ್ಗೆಯೇ ನೈಜ ಗೌರವ ಉಂಟುಮಾಡುವ ಯಾವ ಗೋಜಿಗೂ “ವಿದ್ವಾಂಸರು” ಹೋಗುವುದಿಲ್ಲ!) ಆರಾಧನೆ ಇನ್ನೇನು ಬಂದೇಬಿಟ್ಟಿದೆ. ಕಾಮಧೇನು, ಕಲ್ಪವೃಕ್ಷ, ಅಪೇಕ್ಷಿತ ಪ್ರದಾತರೆಂಬೆಲ್ಲಾ ಪ್ರಭಾವಳಿಯನ್ನು ಆ ಮಹನೀಯರ ಸುತ್ತಾ ಹಬ್ಬಿ ಹರಡಿಸಲಾಗಿದೆ. ಊರೂರ ಕೇರಿ-ಕೇರಿ “ಮಠ”ಗಳಲ್ಲಿ ಬ್ಯಾನರ್ ತೂಗುಕಟ್ಟಿ ಭರ್ಜರಿ Collection ಮಾಡಲಾಗುತ್ತಿದೆ. ಮಾಡಿಕೊಳ್ಳಲಿ; ಬೇಡವೆನ್ನುವುದಿಲ್ಲ. ಆದರೆ ಉದ್ಧರಣೆ ತಿಳಿ ಪಂಚಾಮೃತ, ಚಮಚೆ ಹಯಗ್ರೀವ ಸೇವನೆ ಮಾತ್ರದಿಂದ ತಮ್ಮ  ಜನ್ಮ-ಜನ್ಮಾಂತರದ ಪಾಪಗಳು ತೊಡೆದುಹೋಗುತ್ತದೆಂದುಕೊಳ್ಳುವ ಮುಗ್ಧರ ಬಗ್ಗೆ “ಪಾಪ”  ಎನಿಸುತ್ತದೆ! ರಾಯರ ಗುರು-ಗುರು-ಗುರುವರೇಣ್ಯರ ಮೂಲ ಗುರುಗಳ “ಕುರು-ಭುಂಕ್ಷ್ವ” ಮತ್ತು “ಹರಿಪಾದ ವಿನಂಮ್ರತಾ”  “ಸತ್ಯ”ವನ್ನು, ಸಂದರ್ಭಕ್ಕೆ ತಕ್ಕಂತೆ ಜಾತ್ಯತೀತವಾಗಿ ಜನತೆಗೆ ಮನದಟ್ಟು ಮಾಡಿಸುವ ವೈಶಾಲ್ಯತೆ, ಪಂಡಿತೋಮೋತ್ತಮರಲ್ಲಿ ಕಂಡುಬರುವುದಿಲ್ಲ; ಅವರವರ ಬೆಳ್ಳಿ ಚೊಂಬು, ಪಂಪಾತ್ರೆ-ಉದ್ಧರಣೆ, ಪಟ್ಟೆ ಜರತಾರಿ ಧೋತ್ರ ಜೋಡಿಯ “ಅಲಂಕಾರ”ದ ಚಿಂತೆಯಲ್ಲವರಿರುತ್ತಾರೆ!
ಅದು ಹೇಗಾದರಾಗಲಿ; ಅವರವರ “ಪಾಪಪ್ರಜ್ಞೆ”ಗೆ ಬಿಟ್ಟ ವಿಚಾರ. ಈ ಸಂದರ್ಭದಲ್ಲಿ ಒಂದು ವಿನಮ್ರ ಮನವಿ. ಅದು ಯತಿತ್ವದ ಯತಿ ಆಶಿರ್ವಾದದ ಮಹತ್ವ ಕಪಾಡುವ ಬಗ್ಗೆ. ಜಪತಪಾನುಷ್ಠಾನ ನಿರತ ಯತಿ-ಯೋಗಿಗಳು ಸದ್ಗೃಹಸ್ಥರ ಸದಾಚಾರಕ್ಕೆ ಮೆಚ್ಚಿ, ತಾವು ಉಪಯೋಗಿಸಿದ ಕಾವಿವಸ್ತ್ರ ಹೊದೆಸುತ್ತಿದ್ದ ಕಾಲವಿತ್ತು. ಇದಕ್ಕೆ “ಶೇಷವಸ್ತ್ರ” ಎಂಬ ಮಹತ್ವ ಕೊಡಲಾಗುತ್ತಿತ್ತು. ಯತಿವರೇಣ್ಯರ ಭಿಕ್ಷಾ-ಪಾದಪೂಜಾ ಸಂದರ್ಭದಲ್ಲಿ, ಉತ್ತಮ ಹತ್ತಿ ಬಟ್ಟೆಯ ದಟ್ಟಿ ಮತ್ತು ಹೊದೆವಸ್ತ್ರವನ್ನು ಕೆಮ್ಮಣ್ಣಿನ ಕಾವಿಯಲ್ಲಿ ನೆನೆಸಿ ಮಡಿ ಮಾಡಿ ನಿವೇದಿಸುವ ಶ್ರದ್ಧೆ ಹಿಂದೆಲ್ಲಾ ಇತ್ತು. ಈಗಲಾದರೊ ಮಿರಿ-ಮಿರಿ ಮಿಂಚುವ ಕೃತಕ ಕನಕಾಂಬರ ವಸ್ತ್ರ-ಧೋತ್ರಗಳು ಎಲ್ಲಾ ಸೀರೆಯಂಗಡಿಗಳಲ್ಲೂ ಸಿಕ್ಕುತ್ತವೆ. ಅಂಥವುಗಳನ್ನೇ ತಂದು ಮುರಿಗೆ ಹಿಡಿದು ಕೊಡುವುದೇ ಇಂದಿನ ಪರಿಪಾಠ. ಅದನ್ನು “ಸ್ವಾಮಿಗಳು” ಉಟ್ಟು ಮರೆಯುತ್ತಾರೆ ಸಹ. ಭಾರೀ ಮೊತ್ತದ ಸೇವೆ ಮಾಡಿಸುವ ಭಕ್ತಾದಿಗಳಿಗೆ ಅಗ್ಗದ “ಪೊನ್ನಾಡೆ” ಹೊದ್ದಿಸಿ ಮರ್ಯಾದೆ ಮಾಡುವುದೂ ಈಗ ಚಿಕ್ಕ-ಪುಟ್ಟ ಗುಡಿಗಳಲ್ಲೂ ರೂಢಿಯಾಗಿದೆ. ಹೋಗಲಿ, ಅದಕ್ಕೂ “ಶೇಷವಸ್ತ್ರ”ದ ಗೌರವವನ್ನೇ ಕೊಡೋಣ.
ಆದರೆ ಸಿಲ್ಕ್ ಸೀರೆಯಂಥಾ ಪೀತಾಂಬರಗಳನ್ನು ಗೃಹಸ್ಥರೂ, ವಟುಗಳೂ, ಮಕ್ಕಳೂ ಸೊಂಟದ ಕೆಳಗೂ ಸುತ್ತಿಕೊಂಡು, ಮಠಗಳಲ್ಲೂ ಆರಾಧನೆಗಳಲ್ಲೂ ಸರ-ಪರ ಓಡಾಡುವುದು ಜಿಗುಪ್ಸೆ ತರುತ್ತದೆ. ಕೆಲ ಸಂದರ್ಭಗಳಲ್ಲಂತೂ “ಶ್ರೀಪಾದರು” ಯಾರು, ಸೇವಕರು ಯಾರು, ಆಢ್ಯತೆಯ ಆಡಂಬರದ “ಗೃಹಸ್ಥ ಯಜಮಾನರು”ಗಳು ಯಾರು ಎಂದು ಗುರ್ತಿಸುವುದೂ ಕಷ್ಟವಾಗಿಹೋಗುತ್ತದೆ!
ಆದ್ದರಿಂದ ಯತಿ, ಸಂನ್ಯಾಸಿ, ಪೀಠಾಧಿಪತಿಯಲ್ಲದವರು ಕಾಷಾಯ ಅಥವಾ ಇತರ “ಹೆಂಗಸರ ಬಣ್ಣ”ದ ಧೋತ್ರಗಳನ್ನುಡದೆ ಸರಳ ಪಂಚೆಯ ಕಚ್ಚೆ ಅಥವಾ ಎರಡು ಮಡಿಕೆ ದಟ್ಟಿಯನ್ನುಟ್ಟು ಸಂಭ್ರಮಿಸಿ, ಸಹಕರಿಸಿಸದರೆ, ಯತಿ ಮರ್ಯಾದೆ ಕಾಪಾಡಿದಮತಾಗುತ್ತದೆಂದು ಒಂದು ವಿನಂಮ್ರ ಅರಿಕೆ!

No comments:

Post a Comment