Friday, March 25, 2011

ಕೇರಳ, ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳ ಕಷ್ಟ!

ತಮಿಳ್ನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಶಿಕ್ಷಣದಲ್ಲಿ ಕಡ್ಡಾಯವಾದದ್ದಕ್ಕೆ ಕನ್ನಡಾಭಿಮಾನಿಗಳು ಕನಲಿ ಕಳವಳಿಸುತ್ತಿದ್ದಾರೆ! ಕೇರಳದ ಮೇಲೆ ಕೆರಳೋಣವೇ; ಅಥವಾ ತಮಿಳ್ನಾಡಿನ ಕಾಲಿಗೆ ಬಿದ್ದು ’ಕನ್ನಡವನ್ನು ಕಾಪಾಡಿ’ ಎಂದು ಬೇಡಿಕೊಳ್ಳೋಣವೇ?!
ನಾವು ಸ್ವೀಕರಿಸಿರುವ ಭಾಷಾವಾರು ಪ್ರಾಂತ ರಚನೆ ಪದ್ಧತಿಯ ವಿವೇಕದಲ್ಲಿ ನಮಗೆ ನಂಬಿಕೆಯಿದೆ ತಾನೇ? ಅಂದಮೇಲೆ ಆಯಾ ಎಲ್ಲೆಕಟ್ಟಿನ ಪ್ರಾಂತದಲ್ಲಿ ಆ ಪ್ರದೇಶ ಭಾಷೆಯ ಪಾರಮ್ಯವನ್ನು ಗೌರವಿಸಬೇಕಾದ್ದೂ ಅನಿವಾರ‍್ಯವಾಗುವುದಿಲ್ಲವೇ?
ಶಿಕ್ಷಣ ಭಾಷೆ ವಿಚಾರದಲ್ಲಿ ನಾವು “ಪ್ರಾದೇಶಿಕ ಭಾಷೆ”ಯನ್ನು “ಮಾತೃ ಭಾಷೆ”ಯೊಂದಿಗೆ ತಳುಕು ಹಾಕುವ ತಪ್ಪು ಮಾಡುತ್ತಬಂದಿರುವುದೂ ಗೊಂದಲಕ್ಕೆ ಒಂದಷ್ಟು ಕಾರಣ. ಭಾಷಾವಾರು ಪ್ರಾಂತವೊಂದರ ಸರಕಾರದ ಆದ್ಯತೆ, ತನಗೆ ಅಸ್ತಿತ್ವವನ್ನು ಕೊಡಮಾಡುವ ಪ್ರದೇಶಿಕ ಭಾಷೆಗಿರಬೇಕೆನ್ನುವುದು ವಸ್ತುನಿಷ್ಠ ನಿರೀಕ್ಷೆ ತಾನೇ? ಆ ಭಾಷೆ, ಆ ರಾಜ್ಯದ, ಹೆಚ್ಚು ಕಮ್ಮಿ, ಎಲ್ಲರ ಮಾತೃ ಭಾಷೆಯೂ ಆಗಿರುತ್ತದೆನ್ನುವುದು ಸಹಜ. ’ನಮ್ಮ ಮಕ್ಕಳಿಗೆ ರಾಜ್ಯ ಭಾಷೆಯ ಮೂಲಕ ಶಿಕ್ಷಣ ನೀಡುತ್ತೇವೆ’ ಎಂಬ ಸಂಕಲ್ಪದ ಅರ್ಥ, “ಮಕ್ಕಳ ಮಾತೃ ಭಾಷೆ”ಯಲ್ಲಿ ಶಿಕ್ಷಣ ನೀಡುವುದು ಎಂದಾಗಬಾರದು! ಆದರೆ ಮೂರ್ಖತನದ ಅಂಥಾ ಘೋಷಣೆ, ಹೇಗೊ, ತಿಳಿದೋ, ತಿಳಿಯದೆಯೋ ಚಾಲ್ತಿಗೆ ಬಂದುಬಿಟ್ಟಿದೆ! ಈ ನೆಪ, ಒಡಕು ಹಾಲಿನ ಕೊಳಕು ರಾಜಕೀಯ ಮಾಡುವ ಫುಡಾರಿಗಳ ಕೈ ಕೈದುವಾಗಿ, ಮರಾಠಿ, ಮಲೆಯಾಳಿ, ತೆಮಿಳು, ತೆಲುಗುಗಳನ್ನು ನಾವೇ ಅನಗತ್ಯವಾಗಿ ಮೈಮೇಲೆಳೆದುಕೊಳ್ಳಬೆಕಾದ ಪ್ರಸಂಗಕ್ಕೆ ಕಾರಣವಾಗಿದೆ!
ಒಂದು ಮಣ್ಣಿನಲ್ಲಿ ಕಾಲೂರಿನಿಂತು, ಅದರ ನೀರನ್ನು ಕುಡಿದು ಬದುಕುವ ಪ್ರತಿಯೊಬ್ಬರೂ ಆ ನೆಲದ ಭಾಷೆಯನ್ನೂ ಮೈತುಂಬಿಕೊಳ್ಳಬೇಕಾದ್ದು ಅತ್ಯಗತ್ಯ. ತಮಿಳ್ನಾಡು ಮತ್ತು ಕೇರಳಗಳು ಆ ಕಡ್ಡಾಯವನ್ನು ಜಾರಿ ಮಾಡಿವೆ. ಅವುಗಳ ವಿರುದ್ಧ ಉಗ್ರ ಘೋಷಣೆ ಕೂಗುವ ಕಾಗದದ ಹಿರೋತನಕ್ಕಿಂತಾ ನಮ್ಮ ನಾಡಿನಲ್ಲಿ ಇಡೀ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿ, ಕನ್ನಡ ಮಾತ್ರದಲ್ಲಿ ವ್ಯವಸ್ಥೆಗೊಳಿಸುವ ಪಟ್ಟು ಹೆಚ್ಚು ವೀರ‍್ಯವತ್ತಾದೀತಲ್ಲವೇ?

No comments:

Post a Comment