Tuesday, April 12, 2011

"ಕುಮಾರ" ಹೇಳಿಕೆಯಲ್ಲಿ "ಕೌಮಾರ‍್ಯ"ಕ್ಕೆ ಮೀರಿದ "ಪ್ರೌಢತೆ"!

                ಭ್ರಷ್ಟಾಚಾರದ ಸಂಬಂಧ, ಮಹಾತ್ಮಾ ಗಾಂಧೀಜಿ ಹೆಸರನ್ನುಲೇಖಿಸಿದ ಬಾಲಿಶ ಅಧಿಕಪ್ರಸಂಗವನ್ನು ಬಿಟ್ಟರೆ, ತರುಣ ನಾಯಕ ಕುಮರಸ್ವಾಮಿಯವರ ಹೇಳಿಕೆ, ಉಳಿದಂತೆ ಅತ್ಯಂತ ಪ್ರಬುದ್ಧವಾಗಿಯೇ ಇದೆ! ರಾಜಕೀಯದ ಚಿಂದಿ ಹೆಕ್ಕುವ ಪುಢಾರಿಗಳೇನೋ ಸಹಜವಾಗಿ ಚಿಲ್ಲರೆ ಮಾತಾಡಿಕೊಳ್ಳುತ್ತಾರೆ; ತಟಸ್ಥ ಬುದ್ಧಿಜೀವಿಗಳಾದರೂ ಇದನ್ನು ಪ್ರೌಢವಾಗಿ ತೆಗೆದುಕೊಳ್ಳಬೇಕಗಿದೆ!
                ಈ ಚರ್ಚೆ ಹಿನ್ನೆಲೆ, Corruption ಎಂಬ ಮಾತು. ಈ ಶಬ್ದದ ನಿಘಂಟಿನ ಅರ್ಥ, ಕಾಸಿನ ಅಥವಾ ನೋಟು ತೆಕ್ಕೆಗಳ, ಬ್ಯಾಂಕ್ ಬ್ಯಲೆನ್ಸಿನ ಲಂಚಕ್ಕೆ ಸೀಮಿತವಲ್ಲ; ಕೊಳೆತು ನಾರುವ ಹದಗೆಟ್ಟತನವನ್ನೂ, ವ್ಯವಸ್ಥೆಯ ಶೇಪುಗೇಡೀತನವನ್ನೂ ಅದು ಸೂಚಿಸುತ್ತದೆ. ಅದು ಭಟ್ಟಿಯಾಗುತ್ತಿರುವ ಅಮಲಿನ ಮೂಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಕಚೇರಿಯ ಜವಾನ, ಗುಮಾಸ್ತ, ಮ್ಯಾನೇಜರು, ಸಾಹೇಬರುಗಳ ಮೇಜು, ಕಪಾಟು, ಲಾಕರುಗಳ ಜಾಲಾಟವನ್ನು ಉನ್ನತೀಕರಿಸಹೋಗುವುದು, ‘ಹೆಂಡದ ಮಡಕೆಯ ಹೊರಗೆ ತೊಳೆದಂತೆ ಆಗದೇ?
ಭ್ರಷ್ಟಾಚಾರ ಕುರಿತಂತೆ, ಮಾಜಿ ಮುಖ್ಯಮಂತ್ರಿ, ಪಕ್ಷದ ಹಾಲೀ ರಾಜ್ಯಾಧ್ಯಕ್ಷ ಎಚ್ಕೆಡಿಯವರು ತಳಿದೋ, ತಿಳಿಯದೆಯೋ ಹೇಳಿಬಿಟ್ಟಿರುವ ವಾಚ್ಯಾರ್ಥದ ಲಕ್ಷಣಕ್ಕೆ, ನಮ್ಮ ಪ್ರಸಕ್ತ ರಾಜಕೀಯ ವಿದ್ಯಮಾನ ಬೇಕಾದಷ್ಟೇ ಲಕ್ಷ್ಯ ಒದಗಿಸೀತು. ದಿನ-ನಿತ್ಯದ ಜಾತಿ ರಾಜಕಾರಣ, ಹಸಿಸುಳ್ಳುಗಳ ಓಲೈಕೆ ಮಾಲಿಕೆ, ಅರ್ಥವಾಗಲೀ, ಭಾವವಾಗಲೀ ಇಲ್ಲದ ಮೀಸಲಾತಿ ಪದ್ಧತಿಗಳಲ್ಲಿ ಯಾವ ಪ್ರಾಮಾಣಿಕತೆಯಿದೆ? ನಡೆಯುತ್ತಿರುವ ಗುಪ್ತ ಮತಾಂತರದಲ್ಲಾಗಲೀ, ನಡೆಯುತ್ತಿದೆ ಎಂಬ ಉತ್ಕಟ ಹೋರಾಟದಲ್ಲಾಗಲೀ, ಆ ಹೆಸರಿನಿಂದಲೋ ಮತ್ತೊಂದು ನೆಪದಿಂದಲೋ, ಅಗಿಂದಾಗ್ಗೆ ಕೊಮು ಗಲಭೆಗಳನ್ನು  ಭುಗಿಲೆಬ್ಬಿಸಿ ಬೇಳೆ ಬೇಸಿಕೊಳ್ಳು ಹಿತಾಸಕ್ತಿಗಳಲ್ಲಾಗಲೀ ಯಾವ ಪಾರಲೌಕಿಕ ಮೌಲ್ಯ ಹೊಳೆದುಹೋಗುತ್ತಿದೆ?
ಹಜಾರೆಯವರಂಥಾ ಅಣ್ಣಗಳು, ಸಾಧ್ಯವಾದರೆ, ಪ್ರಾಮಾಣಿಕವಾಗಿ ನಮ್ಮ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಲಿ; ತುಂಡು-ಬಾಡಿನ ಸಾಕು ನಾಯಿಗಳಿಂದಷ್ಟೇ ಅಲ್ಲದೆ ಗೆಲ್ಲುವ ಅಭ್ಯರ್ಥಿಗೆ, ಎಲ್ಲಾ ಜಾತಿ-ಮತ, ಭಾಷೆ, ಕೋಮುಗಳ ಜನರ ವೋಟೂ ಅನಿವಾರ‍್ಯವಾಗುವ ಸನ್ನಿವೇಶವನ್ನುಂಟು ಮಾಡಲಿ. ಅಗ ಪ್ರಜಾಪ್ರಭುತ್ವ ಅವರಿಗೆ ಚಿರ ಋಣಿಯಾದೀತು!

No comments:

Post a Comment