Friday, April 22, 2011

ಲೋಕಪಾಲ ಮಸೂದೆ; ನಾಗರಿಕ V/s ಅನಾಗರಿಕ ಸಮಾಜ

                ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಿಂದ ನ್ಯಾ. ಸಂತೋಷ ಹೆಗಡೆ ಹೊರಬರುತ್ತೇನೆಂದ ’ಅ’ ಸಂತೋಷಕ್ಕೆ ನಾಗರಿಕ ಸಮುದಾಯದ ಅಸಂತೃಪ್ತಿ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯವರ ಸಾತ್ವಿಕತೆಗೆ ಬೆಚ್ಚಿಬಿದ್ದು, ಸರಕಾರ, ಜನಲೋಕಪಾಲ ಮಸೂದೆ ರಚನೆಗೆ ಹೂಂಗುಟ್ಟಿದರೂ, ಈ ಬಗ್ಗೆ ಅಪಸ್ವರ-ಅಪಶೃತಿಗಳು ಆದಿಯಿಂದಲೇ ಕೇಳಿಸುತ್ತಿದೆ. ಕರಡು ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳೂ, ಮೂವರು ಕೇಂದ್ರ ಸಚಿವರೂ ಇರುತ್ತಾರೆಂಬ ಪರಿಕಲ್ಪನೆಯೇ ಹಾಸ್ಯಾಸ್ಪದ! ಹೀಗೆಂದರೆ, ಸಚಿವರು ನಾಗರಿಕ ಸಮಾಜದವರಲ್ಲ ಎಂಬ ಸತ್ಯಸ್ಯ ಸತ್ಯವನ್ನು, ತಿಳಿದೋ ತಿಳಿಯದೆಯೋ ಒಪ್ಪಿಕೊಂಡಂತಾಗಲಿಲ್ಲವೇ?!
                ನ್ಯಾಯವಿದ ಹೆಗ್ಡೆಯವರೂ, ನ್ಯಾಯವಾದಿ ಭೂಷಣದ್ವಯರೂ, ಹಜಾರೆಯವರಂತಹ ಪ್ರಾಮಾಣಿಕರೂ, ಅಗ್ನಿವೇಶರಂತಹ ಋಷಿ ಸಮಾನರೂ ಲಂಚ ವಿರೋಧದ ಮುಂಚೂಣಿಯಲ್ಲದ್ದರೂ ಸಮರ್ಪಕ ಮಸೂದೆಯೊಂದು ಸಿದ್ಧವಾಗಿ ಅದು ಹಾಗೇ ಕಾಯ್ದೆಯಾದೀತೆಂಬ ನಿರೀಕ್ಷೆ ಸುತರಾಂ ಬೇಡ! ಸಂಸತ್ತು ಅದನ್ನು ತನ್ನದೇ ಸ್ವಹಿತದ ಉದ್ದೇಶದಿಂದ ಒಪ್ಪುವುದಿಲ್ಲವಷ್ಟೇ ಅಲ್ಲ, ಪ್ರಜಾತಂತ್ರದ ಹಿತದೃಷ್ಟಿಯಿಂದಲೂ ಇಂಥದು ಸಮರ್ಥನೀಯವಾಗುವುದಿಲ್ಲ!
                ಲಂಚಗುಳಿತನದ ಕೂಪವಾಗಿವೆ ಎಂದು ನಮ್ಮ ಕೆಂಗಣ್ಣಿರುವುದು, ಆರ್‌ಟಿಓ, ಸಬ್‌ರಿಜಿಸ್ಟ್ರಾರ್ ಕಚೇರಿ, ಪೊಲೀಸ್ ಠಾಣೆ ಇತ್ಯಾದಿ ಸರಕಾರೀ ಕಾರ‍್ಯಾಲಯಗಳ ಮೇಲೆ. ಆದರೆ ಅಲ್ಲಿರುವುದು ಭ್ರಷ್ಟಾಚಾರದ ಬೇರು ಅಲ್ಲವೇ ಅಲ್ಲ! ನಿಜವಾಗಿ ಅದಿರುವುದು ಜಾತಿವಾದ, ಕೋಮುವಾದ, ಮನುವಾದ, ನಕ್ಸಲ್‌ವಾದ ಇತ್ಯಾದಿ ಇತ್ಯಾದಿ ರಾಜಕೀಯ ಭಾಷಣದ ಕ್ಲೀಷೆಗಳಲ್ಲಿ; ಛದ್ರೀಕರಣ, ತುಷ್ಟೀಕರಣ ರಾಜನೀತಿಯಿಂದ ಹಾಕಿಕೊಳ್ಳುವ ವೋಟ್ ಬ್ಯಾಂಕ್ ಬೇಲಿಗಳಲ್ಲಿ; ಇಂತಹ ಕೇವಲ 20-25 ಪ್ರತಿಶತ ಪ್ರಾತಿನಿಧ್ಯವಿರುವ ಪಾರ‍್ಲಿಮೆಂಟ್ ಅಥವಾ ಅಸೆಂಬ್ಲಿ ಇಡೀ ದೇಶದ, ರಾಜ್ಯದ ಪರುಪತ್ತೆ ನಡೆಸುವ ಪ್ರಜಾಸತ್ತೆಯ ದುರಂತದಲ್ಲಿ! ಇದು ನಿಚ್ಚಳ ಮತ್ತು ಸುಸ್ಪಷ್ಟ! ಆದರೂ ಪತ್ರಿಕೆಗಳನ್ನೂ ಒಳಗೊಂಡ ಮಾಧ್ಯಮಗಳೂ ಸೇರಿದಂತೆ, ಬಹುತೇಕ ವ್ಯವಸ್ಥೆಗಳು  ಇದರದೇ ಫಲಾನುಭವಿಗಳು! ಅವುಗಳ ಜಾಣ ಕುರುಡಿಗೆ ಇದು ಕಾಣಿಸುವುದಿಲ್ಲ; ಜಾಣ ಕಿವುಡಿಗೆ ಇಂಥಾ ಮಾತುಗಳು ಕೇಳಿಸುವುದಿಲ್ಲ!   

No comments:

Post a Comment