Sunday, April 10, 2011

ಭಲೆ, ಕುಮಾರಸ್ವಾಮಿ! ಭೇಷ್! ಭಲೆ


                ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಿಮಾನಿ ನಾನಲ್ಲ; ಅವರ ಪಕ್ಷದ ಅನುಕಂಪಿಯೂ ಅಲ್ಲ. ಆದರೂ ಏ. 10ರ ಅಪರಾಹ್ನದ ಇ-ಟಿವಿ ಸುದ್ದಿ ನನ್ನನ್ನು ಚಿಕಿತಗೊಳಿಸತು. ವಿಸ್ಮಯದಿಂದ ಸುಧಾರಿಸಿಕೊಂಡನಂತರ ಅದು ಇದನ್ನು ಅಕ್ಷರಿಸುವ ಪ್ರೇರಣೆಯಾಯಿತು!
ರಾಜಕೀಯವೆನ್ನುವುದರಲ್ಲಿರಬಹುದಾದ ಕೊಚ್ಚೆ-ಕೆಸರುಗಳು ಒತ್ತಟ್ಟಿಗಿರಲಿ, ಅವರು ಆಗ ಹುಬ್ಬಳ್ಳಿಯಲ್ಲಿ ಅಂದ ಮಾತು ರಾಜಕೀಯಾತೀತವಾಗಿ ಅಭಿನಂದನಾರ್ಹವೆನಿಸಿತು.
ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲ’ ಎಂಬ ವಿದ್ಯಮಾನದ ಸತ್ಯವನ್ನು ಸಾರ್ವಜನಿಕರಿಗೆ ಬಿಡಿಸಿಹೇಳಿದ ಆ ’ಗಂಡಸುತನ’ ಪ್ರಮಾಣಿಕವಾಗಿಯೂ ಸಂತೋಷ ತಂದಿತು.
                ಆಳವಾದ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಜಾಗೃತಿ ಹುಟ್ಟಿಸಿದ್ದು ಅಣ್ಣಾ ಹಜಾರೆಯವರ ಸತ್ಸಾಧನೆಯೆನ್ನುವುದರಲ್ಲಿ ವಿವಾದವಿಲ್ಲ. ಆದರೆ ಇದು ಭ್ರಷ್ಟಾಚಾರದ ವಿರುದ್ಧ ರಣಕಹಳೆ ಎಂದು ಬೀಗುವವರ ಬಗ್ಗೆ ಮರುಕವಾಗುತ್ತದೆ!
                ಲೋಕಪಾಲ ಮೂಸೂದೆ ಬರೆಯುವ ಕಾಯ್ದೆ ಪಂಡಿತರ ಪ್ರತಿಭೋತ್ಸಾಹದ ಪದಾಕ್ಷರಗಳ ಬಿಗಿಕಟ್ಟಿನಿಂದ ಮಾತ್ರವೇ ದೇಶದ ಸಾರ್ವಜನಿಕ ಜೀವನ ಭ್ರಷ್ಟಾಚಾರದ ಕೊಳೆ-ಕೆಸರಿನಿಂದ ಮುಕ್ತವಾಗಿಬಿಡುತ್ತದೆಂದುಕೊಳ್ಳುವುದು ಅತ್ಯಂತ ಅಸಂಭವ. ಇದು ಭ್ರಮಾಲೋಕ. ನಮ್ಮ ಈ ಭ್ರಮಾಲೋಕಕ್ಕೆ ಕಾರಣ, ಭ್ರಷ್ಟಾಚಾರವೆನ್ನುವುದರ ಬಗ್ಗೆ ನಮ್ಮ ಬಾಲಿಶ ಪರಿಕಲ್ಪನೆ! ಭ್ರಷ್ಟಾಚಾರವೆಂದರೆ, ಚಿಲ್ಲರೆ ಕಾಸಿನಿಂದ ಆರಂಭವಾಗಿ ಲೋಕಾಯುಕ್ತರು ಹಿಡಿದುಹಕುವ ನುರಾರು ಕೋಟಿ ಅಕ್ರಮ ಸಂಭಾವನೆ; ಅದಕ್ಕೆ ತಕ್ಕ ಶಿಕ್ಷೆಯಾಗುವ ವ್ಯವಸ್ಥೆಯಾದರೆ ಸಾಕು ಎಂದು ನಾವಂದುಕೊಂಡುಬಿಟ್ಟಿದ್ದೇವೆ. ಆದರೆ ನಮ್ಮ ಕಣ್ಣೆದುರಿಗೇ ರಾಜಾರೋಷವಾಗಿ ನಡೆಯುವ ಜಾತಿ ರಾಜಕಾರಣ, ಸುಳ್ಳು-ಸುಳ್ಳು ಓಲೈಕೆ, ಅರ್ಥವಿಲ್ಲದ-ಭಾವವಿಲ್ಲದ ಮೀಸಲಾತಿ ಪದ್ಧತಿ ಇವೆಲ್ಲಾ ಔಟ್ ಅಂಡ್ ಔಟ್ ಭ್ರಷ್ಟಾಚಾರವಲ್ಲವೇ; ಮಿಥ್ಯಾಚಾರವಲ್ಲವೇ? ಮತಾಂತರವಾಗಲೀ, ಅದರ ವಿರುದ್ಧ ಉಕ್ಕಟ ಹೋರಾಟವಾಗಲೀ ನಡೆಯುವುದೇಕೆ? ಅಗಿಂದಾಗ್ಗೆ ಕೊಮು ಗಲಭೆಗಳನ್ನು  ಭುಗಿಲೆಬ್ಬಿಸಿ ನಿರ್ದಿಷ್ಟ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಬೇಳೆ ಬೇಯಿಸಿಕೊಳ್ಳುವುದು ಹೇಗೆ? ಇದನ್ನೆಲ್ಲಾ ಒಂದೇ ಮಾತಿಮಲ್ಲಿ “ರಾಜಕೀಯ” ಎಂದು ವರ್ಣಿಸಲಾಗುವುದಿಲ್ಲವೇ? ಇದು ಅವ್ಯಾಹತವಾಗಿದ್ದುಕೊಂಡಿರುವ ತನಕ, ಸಾರ್ವಜನಿಕ ಜೀವನ ನೆಮ್ಮದಿ ಕಾಣುವುದಾದರೂ ಸಾಧ್ಯವೇ?  
                ಇದಕ್ಕೆ ಪರಿಹಾರವೆನ್ನುವುದೇ ಇಲ್ಲವೆಂದಲ್ಲ. ಅದು ಅತ್ಯಂತ ದುರ್ಲಭವೂ ಅಲ್ಲ. ಆ ಸರಳ ಪರಿಹಾರ ಪ್ರಜಾಪ್ರತಿನಿಧಿ ಕಾಯ್ದೆಯ ಮಾನವಂತಿಕೆಯಲ್ಲಿದೆ! ನಿಜವಾದ ಬಹುಮತ ಪ್ರತಿನಿಧಿಗಳು - ಚಲಾಯಿತ ಅರ್ಹ ಮತದ ಶೇ. 50+ ಪಡೆದವರು - ಮಾತ್ರಾ ಸಂಸದರು/ಶಾಸಕರಾಗುವಂತೆ ಕಡ್ಡಾಯ ಮಾಡಿದರೆ ಸಾಕು. ಈ ಹುಚ್ಚುಚ್ಚಾರಗಳಿಗೆ ತಂತಾನೇ ಕಡಿವಾಣ ಬೀಳುತ್ತದೆ. ಅಣ್ಣಾ ಹಜಾರೆ ಪ್ರಣೀತ ಲೋಕಪಾಲ ಮಸೂದೆ ಈ ಐನಾತೀ ಮಾನದಂಡವನ್ನೂ ಹೊಂದಿದ್ದೀತೇ?   

No comments:

Post a Comment