Wednesday, February 9, 2011

ಶಾಸಕರ ಜೀವಭಯ!

ಕರ್ನಾಟಕದ ಶಾಸಕರು ವ್ಯಾಪಕವಾಗಿ ಪೊಲೀಸ್ ರಕ್ಷಣೆಗಾಗಿ ಕೋರುತ್ತಿದ್ದಾರೆ. ಅದನ್ನು ಪೂರೈಸಲಾಗುತ್ತಿದೆ ಕೂಡ. ಅಂದಾಜಿನಂತೆ ಶೇ. 90ರಷ್ಟು ಶಾಸಕರು ಈಗ ಪೊಲೀಸ್ ಸಂರಕ್ಷಣೆಯಲ್ಲಿದ್ದಾರಂತೆ. ಜನಪ್ರತಿನಿಧಿಗಳು ಭೀತಿಯಿಂದ ಪೊಲೀಸ್ ರಕ್ಷಣೆಯಲ್ಲಿರುವುದು ಪ್ರತಿಷ್ಠೆಯ ಸಂಗತಿಯೋ? ಅವಮಾನದ ಸಂಗತಿಯೋ? ಶುದ್ಧ, ಚಾರಿತ್ರ್ಯ, ಶುದ್ಧ ಹಸ್ತ, ’ಶ್ರದ್ಧೆ-ಶುದ್ಧಾಂತಃಕರಣಗಳ ಅತ್ಮಸಕ್ಷಿಯುಳ್ಳವರು ಯಾವುದೇ ಹೊರಗಣ ಶಕ್ತಿಗೆ ಅಷ್ಟಾಗಿ ಅಂಜುವುದಿಲ್ಲ. ಪಕ್ಕದ ಮನೆ ಕಿಟಕಿ ಗಾಜಿಗೆ ಕಲ್ಲೆಸೆದು ಗಾಬರಿಗೊಂಡ ಮಗು ಓಡಿಬಂದು ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವುದು ಸಾಮಾನ್ಯ. ಏಟಿನ ಭಯವಷ್ಟೇ ಅಲ್ಲ, Sense of shame ಸಹ ಆ ಸುಸಂಸ್ಕೃತ ಮಗುವನ್ನು  ಕಾಡಿತು! ಈಗ ಈ ಜನಪ್ರತಿನಿಧಿಗಳನ್ನು ಕಾಡುತ್ತಿರುವುದೇನು? ಇದನ್ನು ಪೊಲೀಸ್ ರಕ್ಷಣೆ ಎನ್ನಬೇಕೋ, ಪೊಲೀಸ್ ಪಹರೆ ಎನ್ನಬೇಕೋ?
ಈ ಪಹರೆಯೂ ಅವರ ಸಾಮಾಜಿಕಾರ್ಥಿಕ ಅಪರಾಧದ ಮೇಲೆ ಕಣ್ಣಿರಿಸುವುದಕ್ಕಿಂತಾ ರಾಜಕೀಯ ಬೇಹುಗಾರಿಕೆ ಉದ್ದೇಶ ಹೊಂದಿದ್ದರೂ ಆಶ್ಚರ‍್ಯವಿಲ್ಲ! ಬಾಹುಬಲ, ಮದ್ಯಬಲ, ಹಣಬಲಗಳಿಂದಲೇ ಮಾರ್ಜಿನಲ್ ವೋಟಿನಿಂದ ಗೆದ್ದು ಬಂದವರಿಗೆ, ಅದೇ ತಂತ್ರದ ಎದುರಾಳಿಯಿಂದ ನಿರಂತರ ಪುಕ-ಪುಕವಿರುವುದು ಸಹಜವೆ. ಅದು ಜೀವ ಹೋಗುವ ಭಯಕ್ಕಿಂತಾ ಹೆಚ್ಚಾಗಿ, ಕುರ್ಚಿ ಕಳುವಾಗಿ ಹೋಗುವ ಭಯ! ಮುತ್ಸದ್ದಿತನದ ತಂತ್ರಗಾರಿಕೆಯಲ್ಲಿ ಈಗ Hidden ಭಯೋತ್ಪಾದಕತೆಯಾದ ಮಾಟ-ಮಂತ್ರವೂ ಪ್ರವೇಶಿಸಿಬಿಟ್ಟಿರುವುದರಿಂದ, ಆಳುವ ಮತ್ತು ವಿರೋಧಿಸುವ ಸೌದಾಗಾರರ ವೈಯಕ್ತಿಕ ಗನ್‌ಮ್ಯಾನ್‌ಗಳಷ್ಟೇ ಸಾಕಾಗಾವುದಿಲ್ಲ; ಜತೆಗೆ ಭೂತೋಚ್ಛಾಟಕ, ಭೂತೋತ್ಪಾದಕ ಆಚಾರು, ವಾಮಾಚಾರುಗಳನ್ನೂ ನೇಮಿಸಬೇಕಾಗಬಹುದದೇನೋ?!  

No comments:

Post a Comment